

ಮೂರ್ನಾಡು: ಮೂರು ನಾಡು ಎಂಬ ಖ್ಯಾತಿ ಹೊಂದಿರುವ, ಬಹಳಷ್ಟು ಸಾಹಿತಿಗಳಿಗೆ ನೆಲೆ ಕಲ್ಪಿಸಿಕೊಟ್ಟಿರುವ ಪುಟ್ಟ ಗ್ರಾಮದಲ್ಲಿ ಕನ್ನಡದ ಕಂಪು ಸೂಸಿತು. ಕನ್ನಡ ಧ್ವಜವನ್ನು ಎತ್ತಿ ಹಿಡಿಯುವದರೊಂದಿಗೆ ಮೆರವಣಿಗೆ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಾಡಿನ ಜನರು ಕನ್ನಡದ ಕಹಳೆ ಮೊಳಗಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಹಾಗೂ ಮೂರ್ನಾಡು ಹೋಬಳಿ ಘಟಕ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ, ಪಿ.ಎಂ.ಶ್ರೀ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಮೂರ್ನಾಡು ಹೋಬಳಿ ಘಟಕದ ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ-ಕನ್ನಡ ಹಬ್ಬ ವಿಜೃಂಭಣೆಯಿಂದ ನಡೆಯಿತು.
ಆಕರ್ಷಕ ಮೆರವಣಿಗೆ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ ಹೊರಟ ಮೆರವಣಿಗೆಗೆ ಹಿರಿಯ ಸಾಹಿತಿ ನಾಗೇಶ್ ಕಾಲೂರು ಹಾಗೂ ಪ್ರಬಾರ ಮಡಿಕೇರಿ ಉಪ ವಿಭಾಗದ ಉಪಾಧೀಕ್ಷಕ ರವಿ ಚಾಲನೆ ನೀಡಿದರು. ಕಳಸದೊಂದಿಗೆ ಮುಂಚೂಣಿಯಲ್ಲಿದ್ದ ಮಹಿಳೆಯರು, ತಾಯಿ ಭುವನೇಶ್ವರಿಯ ಕಲಾಕೃತಿಯನ್ನು ಹೊತ್ತ ಅಲಂಕೃತ ವಾಹನದೊಂದಿಗೆ ನಾಡಿನ ದಾರ್ಶನಿಕರ ವೇಷ ಧರಿಸಿದ್ದ ಮಕ್ಕಳ ಸ್ಥಬ್ಧ ಚಿತ್ರಗಳು, ಡೊಳ್ಳು ಕುಣಿತ ಮತ್ತಿತರ ಕಲಾತಂಡಗಳು, ಅತಿಥಿ ಗಣ್ಯರು, ಶಾಲಾ ಮಕ್ಕಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ್ ಕಾಮತ್ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಎಲ್ಲೆಡೆ ರಾಜ್ಯೋತ್ಸವ ಆಚರಣೆಗೊಳ್ಳುತ್ತಿದ್ದು, ಮೂರ್ನಾಡುವಿನಲ್ಲಿ ರಾಜ್ಯೋತ್ಸವವನ್ನು ಸಮ್ಮೇಳನದ ರೀತಿಯಲ್ಲಿ ನಡೆಸುತ್ತಿರುವುದು ಶ್ಲಾಘಿನೀಯ. ವರ್ಷದ್ದುದ್ದಕ್ಕೂ ಕನ್ನಡ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಸ್ಥಾನಮಾನ ನೀಡಬೇಕು. ಶಿಕ್ಷಣದಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಬೇಕು. ಎಲ್ಲರೂ ಕನ್ನಡದ ಕಂಪನ್ನು ಪಸರಿಸಲು ಕೈಜೋಡಿಸಬೇಕೆಂದು ಕರೆ ನೀಡಿದರು.
ರಾಜ್ಯೋತ್ಸವದ ಮೆರವಣಿಗೆಯನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಇತರ ಭಾಷೆಗಳನ್ನು ಕನ್ನಡ ಭಾಷೆಯೊಂದಿಗೆ ಒಪ್ಪಿಕೊಂಡಿರುತ್ತೇವೆ. ಆದರೆ ನಾವು ನಮ್ಮ ಆಡುಭಾಷೆ ಕನ್ನಡವನ್ನು ಮರೆಯಬಾರದು ಅದನ್ನು ನಿರಂತರವಾಗಿ ಬೆಳೆಸುವ ಪ್ರಯತ್ನ ಮುಂದುವರಿಯಬೇಕು. ಕನ್ನಡ ಭಾಷೆಗೆ ಎಲ್ಲಾ ಭಾಷೆಗಳನ್ನು ಸೇರಿಸಿಕೊಂಡು ಹೋಗುವ ದೊಡ್ಡ ಶಕ್ತಿ ಇದೆ. ಪ್ರಸ್ತುತ ವಿದ್ಯಮಾನದ ಹಲವು ವಿಚಾರಗಳನ್ನು ಹಾಸ್ಯಭರಿತ ಪ್ರಸಂಗದಲ್ಲಿ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಈರಮಂಡ ಹರಿಣಿ ವಿಜಯ್, ಇಲ್ಲಿಯವರೆಗೆ ಕನ್ನಡಕ್ಕಾಗಿ ಶ್ರಮಿಸಿದವರನ್ನು ನೆನೆಪಿಸಿಕೊಂಡರು. ಸರ್ಕಾರದ ಅನುದಾನವಿಲ್ಲದೆ ಆಡಂಬರವಾಗಿ ನಡೆದ ಕನ್ನಡ ಹಬ್ಬದ ಭವ್ಯ ಮೆರವಣಿಗೆ, ಸಭಾ ಕಾರ್ಯಕ್ರಮ ಮತ್ತು ಊಟೋಪಚಾರಕ್ಕೆ ಕೈ ಜೋಡಿಸಿದ ಮೂರ್ನಾಡು ಪಟ್ಟಣದ ಎಲ್ಲಾ ಸಂಘ ಸಂಸ್ಥೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕನ್ನಡ ಭಾಷೆ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಸರ್ವರೂ ಪಣ ತೊಡಬೇಕು. ಅಂಗಡಿ ಮುಂಗಟ್ಟುಗಳ ನಾಮ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲೂ ಕನ್ನಡ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ. ನಮ್ಮಲ್ಲೂ ಕನ್ನಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ: ನಂತರ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತ್ಯ ಕ್ಷೇತ್ರದಿಂದ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಕೊರೊನ ಸಂದರ್ಭದಲ್ಲಿ ವಾರಿಯರ್ಸ್‌ಳಾಗಿ ಸೇವೆ ಸಲ್ಲಿಸಿದ ಕುಟ್ಟಪ್ಪ, ಅಬೂಬಕರ್, ಶಿಕ್ಷಣ ಹಾಗೂ ಸಮಾಜ ಸೇವೆಗಾಗಿ ನಿವೃತ್ತ ಶಿಕ್ಷಕಿ ಬಾಚೆಟ್ಟಿರ ಕಮಲು ಸುಬ್ಬಯ್ಯ, ಹತ್ತನೇ ತರಗತಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆಯುವದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿನಿ ನಿಶ್ಮಿತಾ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುಸ್ತಕ ಬಿಡುಗಡೆ: ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಉಳುವಂಗಡ ಕಾವೇರಿ ಉದಯ ಅವರು ಬರೆದಿರುವ ಪವಿತ್ರ ಪ್ರೀತಿ ಪ್ರಾಪ್ತಿ ಎಂಬ ಪುಚಕವನ್ನು ಬಿಡುಗಡೆಗೊಳಿಸಲಾಯಿತು. ಕಿಗ್ಗಾಲು ಗಿರೀಶ್ ಬಿಡುಗಡೆಗೊಳಿಸಿದರು.
ಸಾಂಸ್ಕೃತಿಕ ರಂಗು: ಕಾರ್ಯಕ್ರಮಕ್ಕೆ ರಂಗು ತುಂಬುವ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶಾಲಾ ಕಾಲೇಜಿನ ಮಕ್ಕಳು, ಸಾರ್ವಜನಿಕರು, ನೃತ್ಯಶಾಲಾ ಮಕ್ಕಳು ಕನ್ನಡ ಗೀತೆಗಳಿಗೆ ಹೆಜ್ಜೆ ಹಾಕುವದರೊಂದಿಗೆ ರಂಗು ಚೆಲ್ಲಿದರು. ನೆರೆದಿದ್ದ ಕನ್ನಡಾಭಿಮಾನಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ಸದಸ್ಯರುಗಳು ಕನ್ನಡ ಹಬ್ಬದ ಯಶಸ್ಸಿಗಾಗಿ ಕೈ ಜೋಡಿಸಿದರು.
ಮಡಿಕೇರಿ ತಾಲೂಕು ಕಸಾಪದ ಅಧ್ಯಕ್ಷೆ ಕಡ್ಲೆರ ತುಳಸಿ, ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್, ಮಡಿಕೇರಿಯ ಖ್ಯಾತ ಇಎನ್‌ಟಿ ವೈದ್ಯ ಮೋಹನ್ ಅಪ್ಪಾಜಿ, ಮೂರ್ನಾಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಕಂದಾಯ ಪರಿವೀಕ್ಷಕ ಚಂದ್ರಪ್ರಸಾದ್, ಮೂರ್ನಾಡು ಗ್ರಾಮಾಡಳಿತ ಅಧಿಕಾರಿ ಅಕ್ಷತಾ ಬಿ.ಶೆಟ್ಟಿ, ಶಿಶುಪಾಲನ ಸಂಸ್ಥೆಯ ಅಧಿಕಾರಿ ಮೇಪಾಡಾಂಡ ಸವಿತಾ ಕೀರ್ತನ್, ಮೂರ್ನಾಡು ಶಾಲೆ ಅಧ್ಯಕ್ಷ ವೆಂಕಪ್ಪ ಇತರರಿದ್ದರು.