ಭಕ್ತಿ ಸಂಗೀತದ ಮೂಲಕ ಕನ್ನಡಿಗರ ಹೃದಯ ಪ್ರವೇಶಿಸಿದ ಕನ್ನಡ : ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್

nirmala
Published on

ಮೈಸೂರು: ಕನ್ನಡ ಭಾಷೆಯು ಭಕ್ತಿ ಸಂಗೀತದ ಮೂಲಕ ಕನ್ನಡಿಗರ ಹೃದಯಕ್ಕೆ ನೇರವಾಗಿ ಸ್ಪರ್ಶಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹೇಳಿದರು.

ಪ್ರವಾಸೋದ್ಯಮ ಸಚಿವಾಲಯದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮೈಸೂರು ಸಂಗೀತ ಸುಗಂಧ’ ದಾಸ ಪರಂಪರೆಯ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿ, ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮವು ದಾಸ ಸಂಗೀತದ ಸುಗಂಧವನ್ನು ಪಸರಿಸುತ್ತದೆ. ದಾಸರ ಪದದಲ್ಲಿ ಬಳಕೆಯಾಗಿರುವ ಪ್ರತಿಯೊಂದು ಕನ್ನಡ ಪದಗಳು ಎಷ್ಟೊಂದು ಅದ್ಭುತವಾಗಿದೆ ಎಂಬುದನ್ನು ಗಮನಿಸಬೇಕು. ಆ ಪದಗಳು ನಮ್ಮೆಲ್ಲರ ಹೃದಯವನ್ನು ಸ್ಪರ್ಶಿಸಿದೆ ಎಂದ ಅವರು, ‘ರಾಗಿ ತಂದಿರು ಭಿಕ್ಷೆಗೆ ರಾಗಿ ತಂದಿರು...’ ಎಂಬ ಪುರಂದರದಾಸರ ಕೀರ್ತನೆ ಉಲ್ಲೇಖಿಸಿದರು. ದಾಸರ ಪದಗಳಲ್ಲಿ ಕನ್ನಡ ಪದಗಳು ಅದ್ಭುತವಾಗಿ ಬಳಕೆಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆರ್ಥಿಕವಾಗಿ ಭಾರತ ಸದೃಢವಾಗಬೇಕಾಗಿದೆ. ಕೇವಲ ಆರ್ಥಿಕವಾಗಿ ಮಾತ್ರ ದೇಶ ಅಭಿವೃದ್ಧಿ ಹೊಂದಿದರೆ ಸಾಲದು ಸಾಂಸ್ಕೃತಿಕವಾಗಿಯೂ ದೇಶ ಅಭಿವೃದ್ಧಿ ಹೊಂದುವ ಅವಶ್ಯಕತೆ ಇದೆ. ಭಾರತ ವೈವಿಧ್ಯಮ ಭಾಷೆ ಹಾಗೂ ಸಂಸ್ಕೃತಿಯನ್ನು ದೇಶದ ಉದ್ದಗಲಕ್ಕೂ ಹೊಂದಿದ್ದು, ದೇಶದ ಪ್ರತಿಯೊಂದು ಭಾಷೆ, ಸಂಸ್ಕೃತಿ, ಸಂಗೀತ ಉಳಿಯಬೇಕಾಗಿದೆ. ದೇಶದ ಪ್ರತಿಯೊಂದು ಭಾಷೆಗಳು ಭಿನ್ನವಾಗಿವೆ ಹಾಗೂ ಶ್ರೇಷ್ಠವಾಗಿದೆ. ವಿವಿಧ ಭಾಷೆ, ಸಂಸ್ಕೃತಿಯನ್ನು ದೇಶ ಹೊಂದಿದ್ದರೂ ನಾವು ವಿವಿಧತೆಯಲ್ಲಿ ಏಕತೆ ಹೊಂದಿದ್ದೇವೆ. ಭಾರತಮಾತೆಯ ಅಡಿಯಲ್ಲಿ ಹಲವಾರು ಭಾಷೆಗಳಿದ್ದು, ಎಲ್ಲ ಭಾಷೆಗಳನ್ನು ಸದೃಢಗೊಳಿಸುವ ಕಾರ್ಯ ಆಗಬೇಕು ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಂದು ರಾಜ್ಯಗಳು ಅಭಿವೃದ್ಧಿ ಕಾಣಬೇಕು ಎಂಬ ಆಶಯ ಹೊಂದಿದ್ದಾರೆ. ಪ್ರತಿಯೊಂದು ರಾಜ್ಯದ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಪ್ರೋತ್ಸಾಹ ದೊರೆಯಬೇಕು ಎಂಬುದು ನಮ್ಮ ಆಶಯವಾಗಿದೆ. ಹಾಸನ ಜಿಲ್ಲೆಯ ಬೇಲೂರಿನ ಚನ್ನಕೇಶವ ದೇವಾಲಯ, ಹಳೆಬೀಡಿನ ಹೊಸ್ಸಳೇಶ್ವರ ದೇವಸ್ಥಾನ, ಮೈಸೂರು ಜಿಲ್ಲೆಯ ಸೋಮನಾಥಪುರದ ಚನ್ನಕೇಶವ ದೇವಸ್ಥಾನವನ್ನು ಯುನೆಸ್ಕೋನ ಪಾರಂಪರಿಕ ತಾಣದ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಪ್ರಸಾದ ಯೋಜನೆಯಡಿ ಚಾಮುಂಡಿಬೆಟ್ಟ ಅಭಿವೃದ್ಧಿಗೆ 45 ಕೋಟಿ ರೂ. ನೀಡಲಾಗಿದೆ, ಸ್ವದೇಶ್ ದರ್ಶನ್ ಯೋಜನೆಯಡಿ 22.48 ಕೋಟಿ ರೂ.ಗಳನ್ನು ಟಾಂಗಾ ವಲಯದ ಅಭಿವೃದ್ಧಿಗೆ ನೀಡ ಲಾಗಿದೆ. ಈ ರೀತಿ ರಾಜ್ಯ ಹಾಗೂ ಮೈಸೂರಿನ ಪ್ರವಾಸೋದ್ಯಮ ಹಾಗೂ ಕಲೆ, ಸಂಸ್ಕೃತಿ ಬೆಳವಣಿಗೆಗೆ ಹಲವಾರು ಕಾರ್ಯಕ್ರಮಗಳನ್ನು ಕೊಡುಗೆಯಾಗಿ ಕೇಂದ್ರದಿಂದ ನೀಡಲಾಗಿದೆ ಎಂದರು.

ಪ್ರತಿಯೊಂದು ಜಿಲ್ಲೆಗಳು ವೈವಿಧ್ಯಮಯ ಆಹಾರ ಹಾಗೂ ಜಿಐ ಉತ್ಪನ್ನಗಳನ್ನು ಹೊಂದಿದ್ದು, ಅವುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಜಾರಿಗೆ ತಂದಿದೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿ ವೈವಿಧ್ಯಮಯ ಆಹಾರ ಉತ್ಪನ್ನ, ಕರಕುಶಲ ವಸ್ತುಗಳು, ಜವಳಿ ಉದ್ಯಮಗಳನ್ನು ಕಾಣಬಹುದು. ಇವೆಲ್ಲದಕ್ಕೂ ನಾವು ಪ್ರೋತ್ಸಾಹ ನೀಡುತ್ತಿದ್ದೇವೆ. ಇದು ಕೇಂದ್ರ ಸರ್ಕಾರದ ಬಹುದೊಡ್ಡ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಕೇಂದ್ರ ಪ್ರವಾಸೋದ್ಯಮ ಇಲಾಖೆ ರಾಜ್ಯ ಸಚಿವ ಸುರೇಶ್ ಗೋಪಿ ಮಾತನಾಡಿ, ಕಳೆದ ಬಾರಿ ಅಂಧ್ರಪ್ರದೇಶದಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವರ್ಷ ಮೈಸೂರಿನಲ್ಲಿ ಹಮ್ಮಿಕೊಂಡಿದ್ದೇವೆ. ಕರ್ನಾಟಕ ತೆಲಂಗಾಣ, ಕೇರಳ ಹಾಗೂ ಇನ್ನಿತರ ರಾಜ್ಯಗಳು ತನ್ನದೇ ಆದ ಸಂಗೀತಾ ಪರಂಪರೆ ಹೊಂದಿದ್ದು, ಕರ್ನಾಟಕದ ದಾಸ ಸಂಗೀತವು ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.

ಪ್ರೇಕ್ಷಣಿಯ ಸ್ಥಳಗಳ ಜತೆಗೆ ಸಂಗೀತವೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಂಗೀತ ಕಾರ್ಯಕ್ರಮ ವೀಕ್ಷಿಸುವ ಸಲುವಾಗಿಯೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಸಂಗೀತಕ್ಕೆ ಇರುವ ಶಕ್ತಿಯಾಗಿದೆ. ಸಂಗೀತಕ್ಕೆ ವಿಶ್ವದ ವಿವಿಧ ಜನರನ್ನು ಒಗ್ಗೂಡಿಸುವ ಶಕ್ತಿ ಇದೆ. ಅರುಣಾಚಾಲ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ವಿಶೇಷ ಹಾಗೂ ವಿಭಿನ್ನವಾದ ಸಂಗೀತಕ್ಕೆ ಸಂಬಂಧಿಸಿದ ಹಬ್ಬಗಳನ್ನು ಮಾಡಲಾಗುತ್ತದೆ. ಅವು ಅಲ್ಲಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ತಿಳಿಸುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂಗಿತ ಸುಗಂಧ ಅವಿಸ್ಮರಣೀಯ ಕಾರ್ಯಕ್ರಮವಾಗಿದ್ದು, ಧರ್ಮ ಮತ್ತು ಜಾತಿಯನ್ನು ಮೀರಿ ಸಂಗೀತವು ಜನರ ಮನಸ್ಸನ್ನು ಸೇರಬೇಕು. ವಿಜಯನಗರ ಸಾಮ್ರಾಜ್ಯ ಆಳ್ವಿಕೆ ಕಾಲದಲ್ಲಿ ಸಂಗೀತ ಮನ್ನಣೆ ಪಡೆಯಿತು. ಕರ್ನಾಟಕದಲ್ಲಿ ಪುರಂದರ ದಾಸರು ಕೀರ್ತನೆಗಳ ಮೂಲಕ ಸಂಗೀತವನ್ನ ಪಸರಿಸಿದರು ಎಂದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ರಾಜರ ಕಾಲದಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ದೊರೆಯಿತು. ಇಂದಿಗೂ ಮೈಸೂರಿನಲ್ಲಿ ಸಂಗೀತ ಪರಂಪರೆ ಮುಂದುವರೆದುಕೊಂಡು ಬಂದಿದೆ. ಕರ್ನಾಟಿಕ ಸಂಗೀತ ಲೋಕಕ್ಕೆ ಪುರಂದರ ದಾಸರು ನೀಡಿದ ಕೊಡುಗೆ ಅವಿಸ್ಮರಣೀಯ. ದಾಸ ಸಾಹಿತ್ಯದ ದಿಗ್ಗಜರಾದ ಪುರಂದರದಾಸರು 4.75 ಲಕ್ಷ ಕೀರ್ತನೆಗಳನ್ನು ರಚಿಸಿ ಕರ್ನಾಟಕ ಸಂಗೀತದ ಪಿತಾಮಹ ಎಂಬ ಖ್ಯಾತಿ ಪಡೆದಿದ್ದಾರೆ. ಒಂದು ವೇಳೆ ಪುರಂದರದಾಸರು ಇಲ್ಲದಿದ್ದರೆ ಇಂದು ಕರ್ನಾಟಿಕ ಸಂಗೀತಾ ಇರುತ್ತಿರಲಿಲ್ಲ ಎಂದರು.ಂಡು ಹೋಗೋಣ ಎಂದರು.

ವೇದಿಕೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸುಮನ್ ಬಿಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net