ನಂಗಲಿಯಲ್ಲಿ ಕನ್ನಡ ಡಿಂಡಿಮ

mbl
Published on

ಮುಳಬಾಗಿಲು: ತಾಲೂಕಿನ ಗಡಿಗ್ರಾಮ ನಂಗಲಿಯ ಶ್ರೀ ವರಸಿದ್ಧಿ ವಿನಾಯಕ ಪ್ರೌಢಶಾಲಾ ಆವರಣದಲ್ಲಿ ಫೆ.-5ರಂದು 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಜ್ಜುಗೊಳಿಸಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎನ್​. ಜಗದೀಶ್​ ತಿಳಿಸಿದರು.

ನಗರದ ಪ್ರವಾಸಿ ಮಂದಿರ ಆವರಣದಲ್ಲಿ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕಿನ ಎಲ್ಲ ಕನ್ನಡಪರ ಹೋರಾಟಗಾರರು, ವಿವಿಧ ಸಂಘ&ಸಂಸ್ಥೆಗಳ ಪದಾಧಿಕಾರಿಗಳು ಕಸಾಪ ಸದಸ್ಯರು ಪಾಲ್ಗೊಳ್ಳುವ ಮೂಲಕ ಗಡಿಯಲ್ಲಿ ಬಾರಿಸು ಕನ್ನಡ ಡಿಂಡಿಮವ ಎಂಬ ಘೋಷ ವ್ಯಾಕ್ಯ ಮೊಳಗಿಸಬೇಕು ಎಂದರು.

ಸರ್ವಾಧ್ಯಕ್ಷರಾಗಿ ನಂಗಲಿ ಗ್ರಾಮದ ವಿ.ಆರ್​. ಪ್ರಭಾಕರಗುಪ್ತ ನೇಮಕಗೊಂಡಿದ್ದು, ಅಂದು ಬೆಳಗ್ಗೆ 8 ಗಂಟೆಗೆ ತಹಸೀಲ್ದಾರ್​ ವಿ.ಗೀತಾ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದು, ನಾಡ ಧ್ವಜಾರೋಹಣವನ್ನು ನಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್​.ಸಿ. ಶ್ರೀಧರ್​, ಪರಿಷತ್​ ಧ್ವಜಾರೋಹಣವನ್ನು ಅಧ್ಯಕ್ಷನಾಗಿ ನಾನು ನೆರವೇರಿಸಲಿದ್ದೇನೆ, ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ 9 ಗಂಟೆಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಚಾಲನೆ ನೀಡಲಿದ್ದು, ಆಶಯ ನುಡಿಗಳನ್ನು ಜಿಲ್ಲಾಧ್ಯಕ್ಷ ಎನ್​.ಬಿ.ಗೋಪಾಲ್​ಗೌಡ ಆಡಲಿದ್ದು, ಕಾರ್ಯಕ್ರಮ ಉದ್ಘಾಟನೆ ವಿಮರ್ಶಕ, ಸಾಹಿತಿ ಡಾ.ಚಂದ್ರಶೇಖರ್​ ಮಾಡಲಿದ್ದಾರೆ ಎಂದರು.

ಕನ್ನಡ ಪರ ಸಂಘಟನೆಗಳು ಒಕ್ಕೂಟದ ಅಧ್ಯಕ್ಷ ಕೆ.ಶಂಕರ್​ ಕೇಸರಿ ಮಾತನಾಡಿ, ರಾಜ್ಯದ ಗಡಿ ಭಾಗದಲ್ಲಿ ಕನ್ನಡದ ಕಂಪನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಲು ಕನ್ನಡಿಗರಾದ ನಾವೆಲ್ಲರೂ ಸ್ವಪ್ರೇರಣೆಯಿಂದ ಪಾಲ್ಗೊಳ್ಳಬೇಕು. ಕನ್ನಡ ಪುಸ್ತಕಗಳನ್ನು, ಕನ್ನಡದ ದಿನಪತ್ರಿಕೆಗಳನ್ನು ಓದುಗರ ಸಂಖ್ಯೆ ಹೆಚ್ಚಿಸುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಸಾಹಿತ್ಯ ಸಮ್ಮೇಳನಗಳು ಪ್ರೇರಣೆಯಾಗಲಿದ್ದು, ಇದನ್ನು ಕನ್ನಡದ ಮನಸುಗಳು ನುಡಿ ಹಬ್ಬವಾಗಿ ಆಚರಿಸಬೇಕು ಎಂದರು. ಕಸಾಪ ಜಿಲ್ಲಾ ಗಡಿನಾಡು ಪ್ರತಿನಿಧಿ ತಾಯಲೂರು ಗೋಪಿನಾಥ್​, ಕಾರ್ಯದರ್ಶಿಗಳಾದ ಉತ್ತನೂರು ವಿ.ನಟರಾಜ್​, ವಾಲಿಬಾಲ್​ ಎಂ.ಶಿವಣ್ಣ, ದುಗ್ಗಸಂದ್ರ ಹೋಬಳಿ ಅಧ್ಯಕ್ಷ ಎಚ್​.ಗೊಲ್ಲಹಳ್ಳಿ ಬಿ.ಎಂ.ಸೋಮೇಶ್​, ಬೈರಕೂರು ಹೋಬಳಿ ಅಧ್ಯಕ್ಷ ತಿಪ್ಪದೊಡ್ಡಿ ಶ್ರೀನಿವಾಸರೆಡ್ಡಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಮಿಟ್ಟಹಳ್ಳಿ ಪ್ರಕಾಶ್​ಗೌಡ, ಸಿದ್ದಲಿಂಗಯ್ಯ, ನಾಗೇಂದ್ರಬಾಬು, ನಂದಕುಮಾರ್​, ನಾಗಾರ್ಜುನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net