ಉತ್ಸಾಹ, ತೀವ್ರತೆ ಬತ್ತದ ಸಾಹಿತಿ ಕುಂವೀ; ಲ್ಯಾಟರೀನ ಕಾದಂಬರಿ ಬಿಡುಗಡೆ

kum
Published on

ಬೆಂಗಳೂರು: ಸಾಮಾನ್ಯವಾಗಿ ಬರಹಗಾರರು, ಹೋರಾಟಗಾರರು, ಭಾಷಣಕಾರರಿಗೆ ದಿನಗಳೆದಂತೆ ಉತ್ಸಾಹ, ತೀವ್ರತೆ ಕಡಿಮೆಯಾಗುತ್ತದೆ. ಆದರೆ ಕಳೆದ 4 ದಶಕಗಳಿಂದ ಉತ್ಸಾಹ, ತೀವ್ರತೆ ಎಂದೂ ಬತ್ತದ ಬರಹಗಾರ ಕುಂ.ವೀರಭದ್ರಪ್ಪ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಗಾಂಧಿಭವನದಲ್ಲಿ ಸಪ್ನ ಬುಕ್ ಹೌಸ್ ಪ್ರಕಟಿಸಿರುವ ಕುಂ.ವೀರಭದ್ರಪ್ಪ ಅವರ ಲ್ಯಾಟರೀನ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ದಲಿತ, ಬಂಡಾಯ ಸಾಹಿತ್ಯದಲ್ಲಿ ಸಮಾಜದಲ್ಲಿ ಸಾಧಿಸಲಾಗದ ಮಾನವಕುಲ ಕಂಟಕ ವಿಷಯಗಳ ಕುರಿತ ವಿಷಾಧದ ಸಂಗತಿಗಳಿವೆ. ಕುಂವೀ ಅವರು ಅಂತಹ ವಿಷಯ ವಸ್ತುವನ್ನಿರಿಸಿಕೊಂಡು ನಾಲ್ಕು ದಶಕಗಳಿಂದ ಬರೆಯುತ್ತಿದ್ದಾರೆ. ಬಡತನ, ಅವಮಾನ, ಕ್ರೌರ್ಯವನ್ನು ಎಳೆ ಎಳೆಯಾಗಿ ತಮ್ಮ ಕತೆ-ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ. ತಮ್ಮ ಲಘುಹಾಸ್ಯದ ಮೂಲಕ ಬಡತನವನ್ನು ಮೀರುವಂತೆ ಕಟ್ಟಿಕೊಟ್ಟಿದ್ದಾರೆ. ನಾಗರೀಕ ಸಮಾಜ ತಲೆತಗ್ಗಿಸುವ ಮಲ ಹೊರುವ ಪದ್ಧತಿಯ ವಿರುದ್ಧ ವಿಭಿನ್ನ ಪರಿಕಲ್ಪನೆಯನ್ನು ಲ್ಯಾಟರೀನ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 33 ಕೋಟಿ ದೇವತೆಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿರುವ ಸಮಾಜದಲ್ಲಿ ‘ಶೌಚೇಶ್ವರ’ ಎಂಬ ಮತ್ತೊಬ್ಬ ದೇವರನ್ನು ಸೃಷ್ಟಿಸಿರುವುದು ಕುಂವೀ ವಿಶೇಷತೆ ಎಂದು ಬಿಳಿಮಲೆ ವಿವರಿಸಿದರು.

ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ವಿಮರ್ಶಕ ಡಾ.ಬಸವರಾಜ ಕಲ್ಗುಡಿ, ಪ್ರಸಾರ ಭಾರತಿ ನಿವೃತ್ತ ನಿರ್ದೇಶಕ ಎಸ್.ಎಚ್.ಆಂಜನಪ್ಪ, ಕಾದಂಬರಿಕಾರ ಕುಂ.ವೀರಭದ್ರಪ್ಪ, ಸಪ್ನ ಬುಕ್ ಹೌಸ್ ಮುಖ್ಯಸ್ಥ ನಿತಿನ್ ಷಾ ಮತ್ತಿತರರಿದ್ದರು.

ಸರ್ಕಾರ ಪುಸ್ತಕ ಖರೀದಿಸಬೇಕು

2021ರಿಂದ ಸರ್ಕಾರ ಯಾವುದೇ ಪುಸ್ತಕ ಖರೀದಿ ಮಾಡಿಲ್ಲ. ವರ್ಷಕ್ಕೆ 20 ಕೋಟಿ ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಸರ್ಕಾರ ಖರೀದಿ ಮಾಡಬೇಕು ಎಂದು ಕುಂ.ವೀರಭದ್ರಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಒಂದೊಂದು ಹಗರಣದಲ್ಲಿ ನೂರಾರು ಕೋಟಿ ಅವ್ಯವಹಾರವಾದ ಬಗ್ಗೆ ಆರೋಪಗಳಿವೆ. ಆದರೆ ಸರ್ಕಾರಕ್ಕೆ ಪುಸ್ತಕ ಖರೀದಿ ಮಾಡಲು ಹಣವಿಲ್ಲವೇ? ಪುಸ್ತಕಗಳು ಉಳಿಯದಿದ್ದರೆ ಸಮಾಜ ಉಳಿಯಲ್ಲ. ಸರ್ಕಾರದ ವಿರುದ್ಧ, ಅನ್ಯಾಯದ ವಿರುದ್ಧ ಮಾತನಾಡುವ ಶಕ್ತಿ ನೀಡುವುದು ಪುಸ್ತಕಗಳು. ಪುಸ್ತಕ ಸಂಸ್ಕೃತಿಯನ್ನು ಉಳಿಸಲು ಸರ್ಕಾರ ಮುಂದಾಗಬೇಕು.

ಇಂದು ಬಿಡುಗಡೆಯಾದ ಲ್ಯಾಟರೀನ ಕಾದಂಬರಿಯಲ್ಲಿ ‘ನೊಂದಾನೊಂದು ಕಾಲದ ಗಲೀಜು’ ಕತೆಗಳಿವೆ. ಗಲೀಜು ಎಂದರೆ ಕೇವಲ ಮಲ-ಮೂತ್ರವಲ್ಲ. ಇಂದಿಗೂ ಬೇರೆ ಬೇರೆ ರೀತಿಯ ಗಲೀಜು ಸಮಾಜದಲ್ಲಿದೆ. ಅವುಗಳನ್ನು ಈ ಕಾದಂಬರಿ ಬರೆದಿದ್ದೇನೆ ಎಂದು ಕುಂವೀ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net