

ಮಂಡ್ಯ: ಕನ್ನಡ ಭಾಷೆಯ ಅನುಷ್ಠಾನ ಮತ್ತು ಬೆಳವಣಿಗೆ ಬಗ್ಗೆ ಚರ್ಚೆ ನಡೆಸಲು ಡಿ.17ರಂದು ನಿಯೋಗ ದೆಹಲಿಗೆ ತೆರಳಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಎಲ್.ಹನುಮಂತಯ್ಯ, ಬಿ.ಕೆ. ಚಂದ್ರಶೇಖರ್, ವಿ.ಆರ್.ಸುದರ್ಶನ್ ಸೇರಿದಂತೆ ಹಲವರು ನಿಯೋಗದಲ್ಲಿದ್ದಾರೆ. ಮುಖ್ಯವಾಗಿ ಬ್ಯಾಂಕ್‌ನಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡುತ್ತೇವೆ. ಅಂತೆಯೇ ಸಂಸದೀಯ ವ್ಯವಹಾರ ಮತ್ತು ಮಾನವ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರ ಭಾರತೀಯ ಭಾಷಾ ವಿಶ್ವವಿದ್ಯಾಲಯ ಸ್ಥಾಪಿಸಿ, ಶಾಸ್ತ್ರೀಯ ಭಾಷೆಗಳ ಬಗ್ಗೆ ಅಧ್ಯಯನ ನಡೆಸಲು 10 ಕೇಂದ್ರ ತೆರೆಯುವುದಾಗಿ ಘೋಷಿಸಿದೆ. ಇದು ಆರಂಭವಾದರೆ, ಕನ್ನಡ ಭಾಷೆ ಸೇರಿದಂತೆ ಎಲ್ಲ ಶಾಸ್ತ್ರೀಯ ಭಾಷೆಗಳ ಬೆಳವಣಿಗೆಯನ್ನು ಕೇಂದ್ರವೇ ನೋಡಿಕೊಳ್ಳುತ್ತದೆ. ಆಗ ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ. ಆದರೆ ಪ್ರತ್ಯೇಕ ಕನ್ನಡ ಶಾಸ್ತ್ರೀಯ ಕೇಂದ್ರವನ್ನು ರಾಜ್ಯ ಸರ್ಕಾರ ಆರಂಭಿಸಬಹುದು. ಒಟ್ಟಾರೆ ಈ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳಲು ಮಾನವ ಸಂಪನ್ಮೂಲ ಸಚಿವರನ್ನು ಭೇಟಿ ಮಾಡುತ್ತೇವೆ ಎಂದರು.
ರಾಜ್ಯದ ಎಲ್ಲ ಸಂಸದರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಕನ್ನಡಪರ ವಿಷಯಗಳು ಬಂದಾಗ ಕೇಂದ್ರದ ಮಟ್ಟದಲ್ಲಿ ಹೋರಾಡುವಂತೆ ಮನವಿ ಮಾಡುತ್ತೇವೆ. ಜೆಎನ್‌ಯು ಮತ್ತು ಕರ್ನಾಟಕ ಭವನಕ್ಕೆ ನಿಯೋಗ ಭೇಟಿ ನೀಡಲಿದೆ. 8 ವರ್ಷದಲ್ಲಿ ಕನ್ನಡ ಶಾಸ್ತ್ರಿಯ ಭಾಷೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸುಮಾರು 6 ಕೋಟಿ ರೂ ಬಿಡುಗಡೆಯಾಗಿದೆ. ಆದರೆ, ಸಂಸ್ಕೃತಕ್ಕೆ 548 ಕೋಟಿ ರೂ, ತಮಿಳಿಗೆ 250 ಕೋಟಿ ರೂ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರ ಸೂಚಿಸಿದ 6 ನಿಯಮಗಳನ್ನು ರಾಜ್ಯ ಸರ್ಕಾರ ಕಾರಣಾಂತರಗಳಿಂದ ಪಾಲಿಸಲು ಆಗಿಲ್ಲ. ಹೀಗಾಗಿ ಶಾಸ್ತ್ರೀಯ ಭಾಷೆಯ ಸಮಸ್ಯೆ ಹಾಗೆಯೇ ಉಳಿದಿದೆ ಎಂದು ಹೇಳಿದರು.
ಖಾಸಗಿ ಕಂಪನಿಗಳು ನಾಡಿನ ನೀರು, ನೆಲ ಮತ್ತು ಮೂಲಸೌಕರ್ಯ ಬಳಸಿಕೊಂಡು ಬೆಳೆಯುತ್ತಿವೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಾಯ್ದೆ ಜಾರಿ ಮಾಡುವಲ್ಲಿ ರಾಜ್ಯ ಸರ್ಕಾರ ಗಡಿಬಿಡಿ ತೋರಿತು. ಮೊದಲು ಖಾಸಗಿ ಕಂಪನಿಗಳ ಮುಖ್ಯಸ್ಥರ ಸಭೆ ಕರೆದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವಂತೆ ಅರಿವು ಮೂಡಿಸಬೇಕು. ಆನಂತರವೂ ಕನ್ನಡಿಗರಿಗೆ ಉದ್ಯೋಗ ನೀಡದ ಕಂಪನಿಗಳನ್ನು ನಿರ್ದಾಕ್ಷಿಣ್ಯವಾಗಿ ರಾಜ್ಯದಿಂದ ಹೊರ ಹಾಕಬೇಕು. ಹೊರ ರಾಜ್ಯಗಳಿಂದ ಬಂದವರು 3 ತಿಂಗಳಲ್ಲಿ ಕನ್ನಡ ಕಲಿಯುವಂತಾಗಬೇಕು. ಇಲ್ಲದಿದ್ದರ ಬಲಿಷ್ಠ ಭಾಷೆ ಬೆಳೆದು, 20 ವರ್ಷದಲ್ಲಿ ಕನ್ನಡ ಅಳಿಯುವ ಅಪಾಯ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೇ 80ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಅದರಲ್ಲೂ ಕನ್ನಡ ಭಾಷಾ ಬೋಧಕರ ಹುದ್ದೆಗಳ ಭರ್ತಿಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ.6ರಷ್ಟು ಅನುದಾನ ಮೀಸಲಿಡಬೇಕು. ಆದರೆ, ಶೇ.3ರಷ್ಟು ಮಾತ್ರ ಅನುದಾನ ಸಿಗುತ್ತಿದೆ. ಇದರಲ್ಲಿ ಶೇ.2ರಷ್ಟು ಬಳಕೆಯಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇವೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲಸೌಕರ್ಯ ಮತ್ತು ಅಗತ್ಯ ಬೋಧಕರನ್ನು ನೇಮಿಸಿದರೆ, ಪಾಲಕರು ಸಹಜವಾಗಿಯೇ ತಮ್ಮ ಮಕ್ಕಳನ್ನು ಸೇರಿಸಲು ಮುಂದೆ ಬರುತ್ತಾರೆ. ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಕನ್ನಡ ಶಾಲೆಗಳನ್ನು ಮುಚ್ಚಿ, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿರುವ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.
ಅಂಗಡಿ, ಹೋಟೆಲ್ ಸೇರಿದಂತೆ ಬಹುತೇಕ ನಾಮಫಲಕಗಳಲ್ಲಿ ಸ್ಥಳನಾಮ ಇರುವುದಿಲ್ಲ. ಹೀಗಾಗಿ ಬೇರೆ ಊರಿನಿಂದ ಬಂದವರಿಗೆ ಈ ಊರು ಯಾವುದು ಎಂಬುದನ್ನು ತಿಳಿಯಲು ಪರದಾಡುವಂತಾಗಿದೆ. ಇನ್ನು ಕೆಲವು ನಾಮಫಲಕಗಳಲ್ಲಿ ದೋಷಗಳಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವಿರಬೇಕು. ಉಳಿದ ಶೇ. 40ರಷ್ಟು ಯಾವ ಭಾಷೆ ಇರಬೇಕು ಎಂಬ ಗೊಂದಲವಿದೆ ಎಂಬ ಮಾಧ್ಯಮದ ಪ್ರಶ್ನೆಗೆ, ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಲು ಕ್ರಮ ಕೈಗೊಳ್ಳುತ್ತೇವೆ. ಕನ್ನಡೇತರರಿಗೆ ಕನ್ನಡ ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 34 ಕಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಇದಕ್ಕೆ ಪ್ರತ್ಯೇಕ ಪಠ್ಯಕ್ರಮವಿದೆ. ಕನಿಷ್ಟ 20 ಜನ ಕಲಿಕಾಸಕ್ತರು ಸಿಕ್ಕರೆ ಅಲ್ಲಿ ಕೇಂದ್ರ ತೆರೆಯುತ್ತೇವೆ ಎಂದರು.
ಪ್ರಾಧಿಕಾರದ ಸದಸ್ಯ ಟಿ.ತಿಮ್ಮೇಶ್, ಕಾರ್ಯದರ್ಶಿ ಸಂತೋಷ ಹಾನಗಲ್ ಇದ್ದರು.