ಮುಂದಿನ 50 ವರ್ಷಗಳು ದಲಿತರಿಗೆ ಬಿಕ್ಕಟ್ಟಿನ ಅವಧಿ

29 hrr
Published on

ಹರಿಹರ: ದೇಶದ ಚುಕ್ಕಾಣಿ ಹಿಡಿದಿರುವವರ ವರಸೆಯನ್ನು ಗಮನಿಸಿದರೆ ಮುಂದಿನ 50 ವರ್ಷಗಳು ದೇಶದ ದಲಿತ ವರ್ಗದವರಿಗೆ ಬಿಕ್ಕಟ್ಟಿನ ಅವಧಿ, ಎಚ್ಚತ್ತುಕೊಳ್ಳದಿದ್ದರೆ ಹಿಂದಿನ ದಿನಗಳಿಗಿಂತ ಹೆಚ್ಚು ಸಂಕಟಮಯ ಪರಿಸ್ಥಿತಿಗೆ ತಳ್ಳುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದರು.

ನಗರದ ಗುರುಭವನದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪೊ›.ಬಿ.ಕೃಷ್ಣಪ್ಪ ಸ್ಥಾಪಿತ) ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ ಪದ್ಧತಿ, ಮಹಿಳೆಯನ್ನು ತುಚ್ಛವಾಗಿ ಕಾಣುವುದು, ದಲಿತರನ್ನು ಶಿಕ್ಷಣದಿಂದ ದೂರ ಇಡುವ ಅನಿಷ್ಟತೆಯನ್ನು ದೇಶದ ಸಂಸ್ಕೃತಿಯೆಂದು ಬಿಂಬಿಸಲಾಗುತ್ತಿದೆ. ಕೆಲವು ಮಠಾಧೀಶರು, ರಾಜಕಾರಣಿಗಳ ಮೂಲಕ ಧ್ವನಿ ಮೂಡಿಸಿ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಿಸುವ ಚರ್ಚೆ ಆರಂಭಿಸಲಾಗಿದೆ ಎಂದರು.

ಸಂವಿಧಾನದ 14ನೇ ವಿಧಿಯಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಿರುವುದು ಭಾರತೀಯರನ್ನು ಉದ್ದೇಶಿಸಿಯೇ ಹೊರತು ಅನ್ಯ ದೇಶದ ಪ್ರಜೆಗಳಿಗಲ್ಲ. 20ನೇ ಶತಮಾನದಲ್ಲಿ ಭಾರತೀಯರ ಪೈಕಿ ಅತಿ ಹೆಚ್ಚು ಪದವಿ ಪಡೆದು ಸಾವಿರಾರು ಪುಸ್ತಕಗಳನ್ನು ಓದಿದ ವ್ಯಕ್ತಿ ಅಂಬೇಡ್ಕರ್ ಎಂದು ತಿಳಿಸಿದರು.

ಕದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ ಮಾತನಾಡಿ, ಸಂಘರ್ಷದ ಸಮಯದಲ್ಲಿ ದಲಿತ ವರ್ಗದ ಮಕ್ಕಳ ಕೈಯಲ್ಲಿ ತಲವಾರ್ ನೀಡುವ ಉಚ್ಚ ವರ್ಗದವರು ತಮ್ಮ ಮಕ್ಕಳ ಕೈಯಲ್ಲಿ ಮಾತ್ರ ಪೆನ್ನು ನೀಡುತ್ತಾರೆ. ನಮ್ಮ ಮಿತ್ರರನ್ನು ನಮ್ಮ ಕೈಯಿಂದ ಹೊಡೆಸಿ ಅವರ ಕೆಲಸ ಮಾಡಿಕೊಳ್ಳುತ್ತಿರುವುದರ ಬಗ್ಗೆ ನಾವು ಎಚ್ಚರವಹಿಸಬೇಕು ಎಂದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪೊ›.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಇಡೀ ದೇಶದ ದಲಿತರು, ಹಿಂದುಳಿದ ವರ್ಗದವರ ಹಣದಿಂದ ಅಯೋಧ್ಯೆಯಲ್ಲಿ ನಿರ್ವಣವಾದ ರಾಮಮಂದಿರದ 26 ಟ್ರಸ್ಟಿಗಳು ಬ್ರಾಹ್ಮಣರು, ಉಳಿದ ವರ್ಗದವರು ಅವರ ಕಣ್ಣಿಗೆ ಕಾಣಲಿಲ್ಲವೆ ಎಂದು ಪ್ರಶ್ನಿಸಿದರು.

ಶಿಕ್ಷಣ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 134 ಸಾಧಕರನ್ನು ಸತ್ಕರಿಸಲಾಯಿತು.

ಮಾಜಿ ಶಾಸಕ ಎಸ್. ರಾಮಪ್ಪ, ನಗರಸಭೆ ಉಪಾಧ್ಯಕ್ಷ ಎಂ. ಜಂಬಣ್ಣ, ಕದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಿಜಯ್ ಮಹಾಂತೇಶ್, ಡಾ.ವಿ.ಟಿ.ನಾಗರಾಜ್, ಡಾ. ಸಚಿನ್ ಬೊಂಗಾಳೆ, ಎ.ಕೆ. ಭೂಮೇಶ್, ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ. ಏಳುಕೋಟಿ, ಸಿದ್ದರಾಮಣ್ಣ ಬುಳ್ಳಸಾಗರ, ಹೊನ್ನಾಳಿ ಶಿಕ್ಷಕ ಚನ್ನಕೇಶ, ಎ.ಕೆ. ರಾಜಪ್ಪ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net