

ಸುರತ್ಕಲ್: ಕನ್ನಡದ ಉದ್ಧಾರ ಕನ್ನಡಿಗರಿಂದಲೇ ಆಗಬೇಕು. ಕನ್ನಡ ಭಾಷೆ ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲಿಲ್ಲ. ಇದಕ್ಕೆ ಕನ್ನಡದ ಕಡೆಗಣನೆ ಕಾರಣ ಎಂದು ಹಿರಿಯ ವಿದ್ವಾಂಸ ಪೊಳಲಿ ನಿತ್ಯಾನಂದ ಕಾರಂತ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಂಗಳೂರು ತಾಲೂಕು ಘಟಕ ಆಶ್ರಯದಲ್ಲಿ ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡವನ್ನು ಕನ್ನಡಿಗರೇ ಕಡೆಗಣಿಸುತ್ತಿರುವುದರಿಂದ ಅನೇಕ ಕನ್ನಡ ಶಾಲೆಗಳು ಮುಚ್ಚಿವೆ. ಕನ್ನಡ ನಾಡು ಏಕೀಕೃತವಾಗಿ ಒಂದು ರಾಜ್ಯವಾಗಿ ಜನ್ಮತಾಳಿದ್ದರೂ ಅಪೂರ್ಣ ಎಂಬ ಸ್ಥಿತಿಯಲ್ಲಿದೆ. ಕಾಸರಗೋಡು ನಮ್ಮ ಕೈ ತಪ್ಪಿದೆ. ಅನ್ಯ ಭಾಷಾ ಸಂಸ್ಕೃತಿಗೆ ಮಾರುಹೋದ ಕಾರಣ ಕನ್ನಡದ ಅವನತಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬದುಕು ಬದಲಿಸುವ ಶಕ್ತಿ: ಎಂಆರ್‌ಪಿಎಲ್ ಸಿಎಸ್‌ಆರ್ ವಿಭಾಗದ ಡಿಜಿಎಂ ವೀಣಾ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಸಾಹಿತ್ಯಕ್ಕೆ ಮಾಂತ್ರಿಕ ಶಕ್ತಿಯಿದೆ. ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ. ನಂದನೇಶ್ವರನ ಸನ್ನಿಧಿಯಲ್ಲಿ ಸರಸ್ವತಿಯ ಉತ್ಸವ ನಡೆಸಿರುವುದು ಸಂತಸ ತಂದಿದೆ ಎಂದರು.
ಶಾಸಕ ಡಾ.ವೈ.ಭರತ್ ಶೆಟ್ಟಿ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ದಂಡೆತ್ತಿ ಬಂದ ಪರಕೀಯರ ಪ್ರಭಾವ ಹಾಗೂ ಮತಾಂತರದ ಅಡ್ಡ ಪರಿಣಾಮವನ್ನು ಕಲೆ, ಸಂಸ್ಕೃತಿಯ ಪ್ರಭಾವದಿಂದ ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು ಎಂದು ಬಣ್ಣಿಸಿದರು.
ಕನ್ನಡ ಭುವನೇಶ್ವರಿ ದಿಬ್ಬಣವನ್ನು ಉಪಮೇಯರ್ ವೇದಾವತಿ ಉದ್ಘಾಟಿಸಿದರು. ಮೇಯರ್ ದಿವಾಕರ ಪಾಂಡೇಶ್ವರ್ ರಾಷ್ಟ್ರ ಧ್ವಜಾರೋಹಣಗೈದರು. ಕನ್ನಡ ಸಾಹಿತ್ಯ ಪರಿಷತ್ ದ.ಕ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪರಿಷತ್ ಧ್ವಜಾರೋಹಣ, ಪಾಲಿಕೆ ಸದಸ್ಯೆ ಸುನೀತಾ ಕನ್ನಡ ಧ್ವಜಾರೋಹಣಗೈದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಅನಂತ ಐತಾಳ್, ತಾಲೂಕು ಸಾಹಿತ್ಯ ಪರಿಷತ್ ಕೋಶಾಧಿಕಾರಿ ಪ್ರೊ.ಕೃಷ್ಣಮೂರ್ತಿ ಪಿ., ಗೌರವ ಕೋಶಾಧಿಕಾರಿ ಪೂರ್ಣಿಮಾ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ.ಶೆಟ್ಟಿ ಸ್ವಾಗತಿಸಿದರು. ಬೈಕಂಪಾಡಿ ಮೀನಕಳಿಯ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ, ರೈತಗೀತೆ ಹಾಡಿದರು. ರಘು ಇಡ್ಕಿದು, ವಿನೋದ್ ಕುಮಾರ್, ಚೇತನ್ ಕದ್ರಿ, ಕ್ಯಾಪ್ಟನ್ ಸುಧಾ ಯು. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದೇವಕಿ ಅಚ್ಯುತ ಪರಿಚಯಿಸಿದರು. ಕಾರ್ಯದರ್ಶಿ ಡಾ.ಪದ್ಮನಾಭ ಭಟ್ ಎಕ್ಕಾರು ವಂದಿಸಿದರು.
ಯಕ್ಷಗಾನದ ಕೊಡುಗೆ ಅಪಾರ: ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಅಪಾರ ಎಂದು ಪೊಳಲಿ ನಿತ್ಯಾನಂದ ಕಾರಂತರು ಬಣ್ಣಿಸಿದರು. ಯಕ್ಷಗಾನ, ಭಜನೆ, ಸಾಂಸ್ಕೃತಿಕ ಚಟುವಟಿಕೆ ಮೊದಲಾದವುಗಳಿಗೆ ಪ್ರಸಿದ್ಧವಾಗಿದ್ದ ವಿದ್ವಾಂಸರು, ಧುರೀಣರು ಮೊದಲಾದವರು ಇದ್ದ ಪಣಂಬೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿರುವುದು ಸ್ತುತ್ಯರ್ಹ. ಯುವ ಪೀಳಿಗೆಗೆ ಸಾಹಿತ್ಯದ ಮಾರ್ಗದರ್ಶನ ಅಗತ್ಯವಾಗಿ ನೀಡಬೇಕಾಗಿದೆ ಎಂದರು.
ಪುಸ್ತಕ ಬಿಡುಗಡೆ: ಎಸ್.ಕೆ.ಗೋಪಾಲಕೃಷ್ಣ ಅವರ ‘ಆಶಾವಾದಿ’ ಮತ್ತು ಕೃಷ್ಣ ಪ್ರಸಾದ್ ಶೇಡಿಗುಮ್ಮೆ ಅವರ ‘ಕಣಿಪುರದ ಕಂಪು’ ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.
ಪಠ್ಯಪುಸ್ತಕಗಳಲ್ಲಿ ಯಾವುದೇ ವರ್ಗದ ಧಾರ್ಮಿಕ ಭಾವನೆಗೆ ನೋವು ಉಂಟು ಮಾಡುವ ವಿಚಾರ ಇರಬಾರದು. ಬುದ್ಧಿಜೀವಿಗಳೆನಿಸಿಕೊಂಡವರು ಮನಸ್ಸಿನಲ್ಲಿ ಇರುವುದನ್ನು ಹೇಳಿ ಇತರರ ಧಾರ್ಮಿಕ ಭಾವನೆಗೆ ಆಘಾತ ಉಂಟು ಮಾಡುವುದು ಸರಿಯಲ್ಲ. ಪೊಳಲಿ ನಿತ್ಯಾನಂದ ಕಾರಂತ ಹಿರಿಯ ವಿದ್ವಾಂಸ
ಸಮಾರೋಪ ಸಮಾರಂಭ: ನಿವೃತ್ತ ಪ್ರಾಧ್ಯಾಪಕ ರಂಗ ಕಲಾವಿದ ಡಾ.ಆರ್.ನರಸಿಂಹ ಮೂರ್ತಿ ಸಮಾರೋಪ ಭಾಷಣ ಮಾಡಿದರು. ಸಮ್ಮೇಳನಾಧ್ಯಕ್ಷ ಪೊಳಲಿ ನಿತ್ಯಾನಂದ ಕಾರಂತ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿದರು.
ಸಾಧಕರಾದ ಶಿವರಾಮ್ ಪಣಂಬೂರು(ಯಕ್ಷಗಾನ), ಡಾ.ವಾಗೀಶ್ವರೀ ಶಿವರಾಮ್(ಸಾಹಿತ್ಯ- ಪ್ರವಚನ), ಮೊದೀನ್ ಕುಂಜಿ (ಸಮಾಜ ಸೇವೆ), ಯೋಗೀಶ್ ಕಾಂಚನ್ ಬೈಕಂಪಾಡಿ(ಸಾಹಿತ್ಯ) ಸೋಮಪ್ಪ ದೇವಾಡಿಗ(ಪಾರಂಪರಿಕ ಕಲೆ), ವಸಂತ್ ಕುಮಾರ್(ನಿವೃತ್ತ ಯೋಧ) ಸುನೀತಾ ಆರ್.ಶೆಣೈ(ಗೃಹ ಉದ್ಯಮ), ಪ್ಲಾವಿಶಾ ವೆಲಿಶಾ ಮೊಂತೆರೋ(ಕ್ರೀಡೆ) ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಕಸಾಪ ಕೋಶಾಧಿಕಾರಿ ಪ್ರೊ.ಪಿ.ಕೃಷ್ಣಮೂರ್ತಿ, ಕಸಾಪ ಸುರತ್ಕಲ್ ಹೋಬಳಿ ಅಧ್ಯಕ್ಷ ವಿನಯ ಆಚಾರ್ ಸ್ವಾಗತಿಸಿದರು. ಸುರತ್ಕಲ್ ಹೋಬಳಿ ಕಸಾಪ ಕಾರ್ಯದರ್ಶಿ ಮಹೇಶ್ ಮೂರ್ತಿ ಸುರತ್ಕಲ್ ನಿರೂಪಿಸಿದರು.