ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಸಂಸ್ಕೃತಿ ಹಸಿರು: ಕೆ.ರಘುರಾಂ ವಾಜಪೇಯಿ ಅಭಿಮತ

Published on

ಮೈಸೂರು: ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿದು ಬೆಳೆಯುತ್ತ ಬಂದಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಎಂದು ಸಮಾಜಸೇವಕ ಕೆ.ರಘುರಾಂ ವಾಜಪೇಯಿ ಅಭಿಪ್ರಾಯಪಟ್ಟರು.
ಜಯನಗರ ಬಡಾವಣೆಯಲ್ಲಿರುವ ನೇಗಿಲಯೋಗಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೈಸೂರು ಸಾಹಿತ್ಯ ದಾಸೋಹ ಸಂಸ್ಥೆಯ 8ನೇ ವಾರ್ಷಿಕೋತ್ಸವ ಮತ್ತು 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗರ ಪ್ರದೇಶದ ಮಂದಿ ಕನ್ನಡವನ್ನು ನವೆಂಬರ್ ತಿಂಗಳಿಗೆ ಮಾತ್ರ ಮೀಸಲಿರಿಸಿದ್ದು, ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೊಳಗಾಗಿರುವ ನಗರ ಪ್ರದೇಶದವರ ನಡುವೆ ಕನ್ನಡ ನಿಜವಾಗಿ ಉಸಿರಾಡುತ್ತಿರುವುದು ನಮ್ಮ ಜನಪದರಲ್ಲಿ ಮಾತ್ರ. ಕೂಲಿ ಕಾರ್ಮಿಕರು, ರೈತರು ಮತ್ತು ಆಟೋ ಚಾಲಕರು ಸೇರಿದಂತೆ ಸಾಮಾನ್ಯ ಜನ ಕನ್ನಡದ ಬಗ್ಗೆ ಅಪರಿಮಿತ ಪ್ರೀತಿ ಹೊಂದಿದ್ದಾರೆ. ಉದಯವಾಗಲಿ ಚೆಲುವ ಕನ್ನಡ ನಾಡು ಎಂಬ ಕವಿಯ ಆಶಯ ಈಡೇರಿದ್ದರೂ ಕನ್ನಡ ನಾಡಿನಲ್ಲಿ ಕನ್ನಡ ಎಷ್ಟು ಮಟ್ಟಿಗೆ ಉಳಿದಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಹಿರಿಯ ವಿಜ್ಞಾನ ಲೇಖಕ ಎಸ್. ರಾಮಪ್ರಸಾದ್ ಮಾತನಾಡಿ, ನಮ್ಮ ಆಲೋಚನೆ ಮತ್ತು ಚಿಂತನೆಗಳು ಕನ್ನಡದಲ್ಲಿ ಮೂಡಿದಾಗ ಮಾತ್ರ ಕನ್ನಡ ಮತ್ತಷ್ಟು ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಿರಂತರವಾಗಿ ಸಾಹಿತ್ಯದಾಸೋಹವನ್ನು 8 ವರ್ಷಗಳ ಕಾಲ ನಡೆಸಿಕೊಂಡು ಬಂದಿರುವ ಪದ್ಮಾ ಆನಂದ್ ದಂಪತಿಯ ಕನ್ನಡದ ಬದ್ಧತೆ ಅಭಿನಂದನಾರ್ಹ ಎಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಶುದ್ಧ ಕನ್ನಡದಲ್ಲಿಯೇ ಮಾತನಾಡುವ ಸ್ಪರ್ಧೆಯಲ್ಲಿ ಬಳಗದ 30ಕ್ಕೂ ಹೆಚ್ಚು ಸದಸ್ಯರು ಇದ್ದರು. ಸ್ಪರ್ಧೆಯಲ್ಲಿ ಪ್ರೊ.ಪದ್ಮಿನಿಹೆಗಡೆ-ಪ್ರಥಮ ಬಹುಮಾನ, ಬಿ.ಆರ್.ನಾಗರತ್ನ ದ್ವಿತೀಯ ಬಹುಮಾನ, ತೃತೀಯ ಬಹುಮಾನ ಕೆ.ಲಕ್ಷ್ಮಿ, ಎನ್.ವಿ.ರಮೇಶ್, ಪರಿಮಳ ಸಮಾಧಾನಕರ ಬಹುಮಾನ ಪಡೆದರು.
ಹಿರಿಯ ಗಮಕಿ ಬಿ.ಪಿ.ಅಶ್ವತ್ಥನಾರಾಯಣ, ಮೈಸೂರು ಸಾಹಿತ್ಯ ದಾಸೋಹ ಸಂಸ್ಥೆಯ ಸಂಸ್ಥಾಪಕ ಎಂ.ಆರ್.ಆನಂದ್, ಸಂಚಾಲಕಿ ಪದ್ಮಾ ಆನಂದ್, ರಂಗನಾಥ್ ಮೈಸೂರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net