ಬದುಕು ಆಲೋಚನೆಗಳ ಆಗರ

Udgatane
ಅಂಡಮಾನ್‌ನ ಪೋರ್ಟ್‌ಬ್ಲೇರ್ ನಗರದಲ್ಲಿ ಮಂಗಳೂರಿನ ಹೃದಯ ವಾಹಿನಿ ಸಂಘ ಆಯೋಜಿಸಿದ್ದ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಶಿವಗಂಗಾ ಮಠದ ಡಾ.ಶ್ರೀಮಲಯ ಶಾಂತಮುನಿ ಶಿವಾಚಾರ್ಯರು ಉದ್ಘಾಟಿಸಿದರು. ಸಮ್ಮೇಳನದ ಅಧ್ಯಕ್ಷೆ ಡಾ.ಅರ್ಚನಾ,ಅಥನಿ ಮತ್ತಿತರರು ಉಪಸ್ಥಿತರಿದರು.
Published on

*ಡಾ.ಶ್ರೀಮಲಯ ಶಾಂತಮುನಿ ಶಿವಾಚಾರ್ಯರು ಅಭಿಮತ

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಮಾನವ ಬದುಕು ಆಲೋಚನೆಗಳ ಆಗರ. ಗತಕಾಲದ ಚರಿತ್ರೆ, ಭವಿಷತ್ತಿನ ಗುರಿ ಇವುಗಳ ಆಧಾರದಲ್ಲಿ ವರ್ತಮಾನದ ಬದುಕನ್ನು ರೂಪಿಸುವ ಮನೋಭಾವ ಪ್ರತಿಯೊಬ್ಬರದಾಗಬೇಕು ಎಂದು ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿ ಶಿವಗಂಗಾ ಮಠದ ಡಾ.ಶ್ರೀಮಲಯ ಶಾಂತಮುನಿ ಶಿವಾಚಾರ್ಯರು ತಿಳಿಸಿದರು.
ಅಂಡಮಾನ್‌ನಲ್ಲಿ ಮಂಗಳೂರಿನ ಹೃದಯ ವಾಹಿನಿ ಸಂಘ ಹಮ್ಮಿಕೊಂಡಿದ್ದ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅಂಡಮಾನ್‌ನ ಪೋರ್ಟ್‌ಬ್ಲೇರ್‌ನಲ್ಲಿರುವ ಸೆರೆಮನೆ(ಜೈಲು) ಸ್ವಾತಂತ್ರ ಹೋರಾಟಗಾರರು ಅನುಭವಿಸಿದ ಯಾತನೆಯನ್ನು ಅರಿವು ಮಾಡಿಕೊಡುವ ಬಹು ಮುಖ್ಯವಾದ ಸ್ಮಾರಕ. ವೀರ ಸಾವರ್ಕರ್ ಮೊದಲಾದ ದೇಶಭಕ್ತರು ಅನುಭವಿಸಿದ ಸೆರೆವಾಸವನ್ನು ಸಾಕ್ಷೀಕರಿಸುವ ಈ ಸ್ಮಾರಕ ಅವರ ತ್ಯಾಗಮಯ ಜೀವನವನ್ನು ಕಣ್ಣ ಮುಂದೆ ತರುವಂತಿದೆ ಎಂದರು.
ದೇಶಕ್ಕೆ ವಿವಿಧ ರೀತಿಯಲ್ಲಿ ದೇಶಭಕ್ತರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಇತಿಹಾಸ ಪುಟಗಳನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡದಲ್ಲಿ ದೇಶಭಕ್ತರ ತ್ಯಾಗ ಬಲಿದಾನ ದೇಶದ ಕೊಡುಗೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವಿದೇಶದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮಂಗಳೂರಿನ ಹೃದಯ ವಾಹಿನಿ ಸಂಘ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಾದರಿ ಎನಿಸಿದೆ ಎಂದರು.
ಸಮ್ಮೇಳನದ ಅಧ್ಯಕ್ಷೆ ಡಾ.ಅರ್ಚನಾ ಅಥನಿ ಮಾತನಾಡಿ, ಇತಿಹಾಸವನ್ನು ಅಧ್ಯಯನ ಮಾಡುವುದರ ಜತೆಗೆ ಅರ್ಥೈಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ದೇಶ ಸುತ್ತು ಕೋಶ ಓದು ಎಂಬ ಗಾದೆಯಂತೆ ಪ್ರತಿಯೊಬ್ಬರು ಪ್ರವಾಸ ಮಾಡಿ ಮತ್ತಷ್ಟು ಜ್ಞಾನ ಋದ್ಧಿಸಿಕೊಳ್ಳಬೇಕಿದೆ. ಕನ್ನಡ ಸಾಹಿತ್ಯ ಸಂಸ್ಕೃತಿ ಸಾಕಷ್ಟು ವರ್ಷಗಳ ಇತಿಹಾಸಹೊಂದಿದ್ದು ಸಾಹಿತ್ಯ ಸಂಸ್ಕೃತಿ ಉಳಿವಿಗೆ ವಿದೇಶದಲ್ಲಿ ಮಂಗಳೂರಿನ ಹೃದಯ ವಾಹಿನಿ ಸಂಘ ಕಾರ್ಯ ಮಹತ್ವದದ್ದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net