ಡಾ.ಕಯ್ಯರ ಹೆಸರಲ್ಲಿ ಕನ್ನಡ ಸಂಸ್ಕೃತಿ ಭವನ: ಪೆರಡಾಲ ಕವಿತಾ ಕುಟೀರ ಸನಿಹ ತಲೆಯೆತ್ತುತ್ತಿದೆ ಭವ್ಯ ಮಂದಿರ : ಉದ್ಘಾಟನೆಗೆ ಶೀಘ್ರ ದಿನ ನಿಗದಿ

New Project (20)
Published on

ಪುರುಷೋತ್ತಮ ಪೆರ್ಲ ಕಾಸರಗೋಡು

‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂದು ಕಾಸರಗೋಡಿನ ಕನ್ನಡಿಗರಿಗಾದ ಅನ್ಯಾಯದ ವಿರುದ್ಧ ಸೆಟೆದು ನಿಂತು ತಮ್ಮ ಜೀವಮಾನವಿಡೀ ಕನ್ನಡ ಭಾಷೆ- ಸಂಸ್ಕೃತಿಗಾಗಿ ಹೋರಾಟ ನಡೆಸಿರುವ ಸಾಹಿತಿ ನಾಡೋಜ ಡಾ.ಕಯ್ಯರ ಕಿಞಣ್ಣ ರೈ ಅವರ ನಾಮಧೇಯದಲ್ಲಿ ಅವರ ಹುಟ್ಟೂರು ಪೆರಡಾಲ ಕವಿತಾ ಕುಟೀರ ಸನಿಹ ನಿರ್ಮಾಣಗೊಳ್ಳುತ್ತಿರುವ ‘ನಾಡೋಜ ಡಾ.ಕಯ್ಯರ ಕಿಞಣ್ಣ ರೈ ಕನ್ನಡ ಸಂಸ್ಕೃತಿ ಭವನ’ದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ.

ಡಾ.ಕಯ್ಯರ ಕಿಞಣ್ಣ ರೈ ಮನೆಯವರು ಕವಿತಾ ಕುಟೀರ ಸನಿಹದ ಕಲ್ಲಕಳಯ ಬತ್ತೇರಿ ಎಂಬಲ್ಲಿ ಉದಾರವಾಗಿ ನೀಡಿರುವ 31 ಸೆಂಟ್ಸ್ ಜಾಗದಲ್ಲಿ ಸುಸಜ್ಜಿತ ಭವನ ನಿರ್ಮಾಣಗೊಳ್ಳುತ್ತಿದೆ.

ಕರ್ನಾಟಕ ಸರ್ಕಾರದ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಎರಡು ಕೋಟಿ ರೂ. ಅನುದಾನದೊಂದಿಗೆ ಪ್ರಾಧಿಕಾರದ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ದ.ಕ ಜಿಲ್ಲಾ ನಿರ್ಮಿತಿ ಕೇಂದ್ರ, ಕನ್ನಡ ಸಾಂಸ್ಕೃತಿಕ ಭವನದ ಕಾಮಗಾರಿ ನಡೆಸಿಕೊಡುತ್ತಿದೆ. ಕವಿತಾ ಕುಟೀರ ಪೆರಡಾಲದ ಕಟ್ಟಡ ನಿರ್ಮಾಣ ಸಮಿತಿಯ ಸಂಪೂರ್ಣ ಸಹಕಾರದೊಂದಿಗೆ ಈ ಮಹತ್ತರ ಯೋಜನೆ ಜಾರಿಯಾಗುತ್ತಿದೆ. ಕವಿತಾ ಕುಟೀರ ಕಟ್ಟಡ ನಿರ್ಮಾಣ ಸಮಿತಿಯಲ್ಲಿ ಡಾ.ಎಂ.ಮೋಹನ ಆಳ್ವ ಮೂಡುಬಿದಿರೆ, ಉದ್ಯಮಿ ಡಾ.ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಅಜಿತ್ ಕುಮಾರ್ ಮಾಲಾಡಿ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿಯವರೂ ಸದಸ್ಯರಾಗಿರುತ್ತಾರೆ.

ಸುಸಜ್ಜಿತ ವೇದಿಕೆ, ಎರಡು ಕೊಠಡಿ, ಕಚೇರಿ, ತಳಭಾಗದಲ್ಲಿ ಸಭಾಂಗಣ ಹಾಗೂ ಮೇಲ್ಮಹಡಿಯಲ್ಲಿ ಅರ್ಧ ಭಾಗಕ್ಕೆ ಬಾಲ್ಕನಿ ಒಳಗೊಂಡ ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದೆ. ಕಲ್ಲಕಳಯದ ಎತ್ತರದ ಪ್ರದೇಶದಲ್ಲಿ ತಲೆಯೆತ್ತಿರುವ ಈ ಭವನದ ಸುತ್ತ ಆವರಣ ಗೋಡೆ, ಅತಿಥಿಗೃಹ, ಸರ್ವಋತು ಸಂಚಾರದ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಬೇಕಾಗಿದೆ. ಬದಿಯಡ್ಕ ಪೇಟೆಯಿಂದ ಬೆಳಿಂಜ ರಸ್ತೆಯ ಒಂದೂವರೆ ಕಿ.ಮೀ. ದೂರದಲ್ಲಿ ಸುಸಜ್ಜಿತ ಭವನ ನಿರ್ಮಾಣವಾಗುತ್ತಿದೆ. ಉಳಿದಿರುವ ಕಾಮಗಾರಿ ಪೂರ್ತಿಗೊಳಿಸುವುದರ ಜತೆಗೆ ಜಾಗದ ದಾಖಲೆಪತ್ರಗಳನ್ನು ಸರಿಪಡಿಸುವ ಕೆಲಸವೂ ಶೀಘ್ರ ನಡೆಯಬೇಕಾಗಿದೆ.

ಮುಖ್ಯರಸ್ತೆಯಿಂದ ಭವನಕ್ಕೆ ಸಾಗುವ ರಸ್ತೆಯನ್ನು ಅಭಿವೃದ್ಧಿಪಡಿಸುವುದು, ಭವನಕ್ಕೆ ಕಟ್ಟಡ ಸಂಖ್ಯೆ ಒದಗಿಸುವುದರ ಜತೆಗೆ ನಿರಾಕ್ಷೇಪಣಾ ಸರ್ಟಿಫಿಕೇಟ್ ಒದಗಿಸುವುದು, ಸಂಬಂಧಪಟ್ಟ ಇಲಾಖೆಗಳ ಮೂಲಕ ನೀರಾವರಿ, ವಿದ್ಯುತ್ ಸಂಪರ್ಕ ಒದಗಿಸುವಂತೆ ಪ್ರಾಧಿಕಾರ ಈಗಾಗಲೇ ಕಾಸರಗೋಡು ಜಿಲ್ಲಾಧಿಕಾರಿ, ಕಾಸರಗೋಡು ಮತ್ತು ಮಂಜೇಶ್ವರದ ಶಾಸಕರು ಹಾಗೂ ಕೇರಳದ ಸಚಿವರನ್ನು ಮನವಿ ಮೂಲಕ ಒತ್ತಾಯಿಸಿದೆ.

ನಾಡೋಜ ಡಾ.ಕಯ್ಯರ ಕಿಞಣ್ಣ ರೈ ಹೆಸರಲ್ಲಿ ಅವರ ಹುಟ್ಟೂರು ಕವಿತಾ ಕುಟೀರ ಸನಿಹ ಡಾ.ಕಯ್ಯರ ಅವರ ಮನೆಯವರು ಒದಗಿಸಿರುವ 31 ಸೆಂಟ್ಸ್ ಜಾಗದಲ್ಲಿ ಸುಸಜ್ಜಿತ ಕನ್ನಡ ಸಂಸ್ಕೃತಿ ಭವನ ತಲೆಯೆತ್ತಲಿದೆ. ಈಗಾಗಲೇ ಶೇ.80ರಷ್ಟು ಕಾಮಗಾರಿ ಪೂರ್ತಿಗೊಂಡಿದ್ದು, ಪ್ರಾಧಿಕಾರ ಅಧ್ಯಕ್ಷರ ಜತೆ ಚರ್ಚಿಸಿ ಮುಂದಿನ ತಿಂಗಳಲ್ಲಿ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು. ಭವನದ ಚಟುವಟಿಕೆ ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೇತೃತ್ವದಲ್ಲಿ ಉತ್ತಮ ಸಮಿತಿ ರಚಿಸಲಾಗುವುದು. ಪ್ರಕಾಶ್ ಮತ್ತಿಹಳ್ಳಿ ಕಾರ್ಯದರ್ಶಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net