

ಸೋಮವಾರಪೇಟೆ: ಕರ್ನಾಟಕ ಸಂಭ್ರಮದ 50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಕನ್ನಡ ಜ್ಯೋತಿ ರಥ ಮಂಗಳವಾರ ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸಿತು.
ಕಕ್ಕೆಹೊಳೆಯ ಜಂಕ್ಷನ್‌ಗೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್, ಶಿಕ್ಷಣ ಇಲಾಖೆ, ಕನ್ನಡಪರ ಸಂಘಟನೆಗಳು ಮತ್ತು ಕನ್ನಡಾಭಿಮಾನಿಗಳು ಸ್ವಾಗತಿಸಿ, ಪುಷ್ಪಾರ್ಚನೆ ಮಾಡಿದರು.
ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಸಮ್ಮಖದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡೊಳ್ಳು ವಾದ್ಯ ನೋಡುಗರನ್ನು ಅಕರ್ಷಿಸಿತು. ವೇದಿಕೆ ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ಮುಖ್ಯಶಿಕ್ಷಕ ಹೇಮಂತ್ ಮಾತನಾಡಿ, ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ 10 ತಿಂಗಳ ಹಿಂದೆ ಹಂಪಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ್ದರು. 1973ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು. ರಥ ರಾಜ್ಯದೆಲ್ಲೆಡೆ ಸಂಚರಿಸಿ ಕರ್ನಾಟಕದ ಶ್ರೀಮಂತ ಇತಿಹಾಸ, ಪರಂಪರೆ, ಸಂಸ್ಕೃತಿ, ನಾಡು, ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತದೆ ಎಂದು ಹೇಳಿದರು.
ಸಾಹಿತಿಗಳಾದ ಸುನಿತಾ, ಜಲಜಾಶೇಖರ್ ಮಾತನಾಡಿ, ಕರ್ನಾಟಕ ಏಕೀಕರಣದ ಹೋರಾಟ, ಕನ್ನಡ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶೀಧರ್ ಕಂಕನವಾಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ.ವಿಜೇತ್, ಬಿಇಒ ಎಸ್.ಭಾಗ್ಯಮ್ಮ, ಕರವೇ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್, ನಗರ ಅಧ್ಯಕ್ಷ ಮಂಜುನಾಥ್, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸುರೇಶ್‌ಶೆಟ್ಟಿ, ಪ್ರಮುಖರಾದ ಎಚ್.ಸಿ.ನಾಗೇಶ್, ಜಯಪ್ಪಹಾನಗಲ್, ಟಿ.ಈ.ಸುರೇಶ್, ಎಚ್.ಎ.ನಾಗರಾಜ್ ಇದ್ದರು.