

ಮಡಿಕೇರಿ: ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ವತಿಯಿಂದ ಕನ್ನಡ ಭವನದ ಕೊಡಗು ಜಿಲ್ಲಾ ಘಟಕ ಹಾಗೂ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಉದ್ಘಾಟನೆಗೊಂಡಿತು.
ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರು ಕನ್ನಡ ಭವನದ ಜಿಲ್ಲಾಧ್ಯಕ್ಷರು ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಿಗೆ ಕನ್ನಡ ಬಾವುಟ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್, ಚುಟುಕು ಪರಿಷತ್ತಿನ ಬೆಳವಣಿಗೆ ಹೇಗೆ ಎಂಬುದು ಪ್ರಶ್ನಾರ್ಥಕವಾಗಿತ್ತು. ಈ ಸಂದರ್ಭದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಸ್ವಂತವಾಗಿ ಸಮಿತಿ ರಚಿಸಿದ್ದು, ಇಂದು ಜಿಲ್ಲಾ ವ್ಯಾಪಿ ಪಸರಿಸುತ್ತಿದೆ ಎಂದರು.
ಇಂದು ಕೊಡಗಿನಲ್ಲಿ ಕನ್ನಡ ಭವನ ಮತ್ತು ಚುಟುಕು ಪರಿಷತ್ ಘಟಕ ರಚನೆಯಾಗಿದ್ದು, ಹೊಸ ಆಶಾಭಾವನೆ ಮೂಡಿಸಿದೆ. ಸಾಹಿತ್ಯ ಕ್ಷೇತ್ರದ ಬಗ್ಗೆ ಯುವ ಜನತೆಯಲ್ಲಿ ಆಲಸ್ಯ ಭಾವನೆ ಉಂಟಾಗಿದ್ದು, ಯುವ ಜನತೆ ತಿರುಗಿ ನೋಡದ ಸ್ಥಿತಿಯಲ್ಲಿದೆ. ಯುವ ತಲೆಮಾರು ಮನಸ್ಸು ಮಾಡಿದರೆ ಮಾತ್ರ ಕನ್ನಡ ಸಂಸ್ಕೃತಿಯ ಉಳಿವು ಸಾಧ್ಯ ಎಂದು ಹೇಳಿದರು.
ಕೀರ್ತಿ ಸಂಪಾದನೆ ಪ್ರತಿಯೊಬ್ಬರ ಆಸಕ್ತಿ. ಅದು ಸಾಹಿತ್ಯ ಕ್ಷೇತ್ರದಿಂದ ಲಭ್ಯವಾಗಬೇಕಾದರೆ ಹಿರಿಯರು ಕಿರಿಯರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಆ ಮೂಲಕ ಮುಂದಿನ ತಲೆಮಾರು ಸಾಹಿತ್ಯ ಕ್ಷೇತ್ರವನ್ನು ಉಳಿಸಿ ಬೆಳೆಸುವಂತಾಗಬೇಕು. ಆದ್ದರಿಂದ ಯುವ ಜನತೆಯನ್ನು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಸಾಹಿತ್ಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಮಾತನಾಡಿ, ಉದಯೋನ್ಮುಖ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಮನೆಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಬೇಕು. ಆ ಮೂಲಕ ಪುಸ್ತಕ ಜಾಗೃತಿ ಆಗಬೇಕು. ಪುಸ್ತಕಗಳು ಓದುವುದರಿಂದ ಜಾಗೃತಿಯನ್ನು ಮೂಡಿಸುತ್ತದೆ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ. ಪೋಷಕರು ಆದಷ್ಟು ಮಕ್ಕಳಿಗೆ ಅನುಕೂಲವಾದ ಪುಸ್ತಗಳನ್ನು ಇಡಬೇಕು. ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿದರೆ ಮುಂದಿನ ದಿನಗಳಲ್ಲಿ ಸಾಹಿತ್ಯಸಕ್ತರಾಗುತ್ತಾರೆ ಎಂದರು.
ಹಿರಿಯ ಸಾಹಿತಿ ಭಾರಧ್ವಾಜ್ ಕೆ.ಆನಂದತೀರ್ಥ ಮಾತನಾಡಿ, ಪ್ರಪಂಚದ ಎಲ್ಲಾ ದೇಶಗಳಲ್ಲಿ ಚುಟುಕುಗಳಿವೆ, ಚುಟುಕು ಬರೆಯುವುದು ಸುಲಭದ ಕೆಲಸವಲ್ಲ. ನಾಲ್ಕು ವಾಕ್ಯದಲ್ಲಿರುವ ಚುಟುಕುಗಳು ಸರಳವಾಗಿ ಅರ್ಥಗರ್ಭಿತವಾಗಿರಬೇಕು ಮತ್ತು ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವಂತಿರಬೇಕು. ನೂತನ ಪದಾಧಿಕಾರಿಗಳು ಚುಟುಕುಗಳಿಗೆ ಜೀವ ತುಂಬುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಭವನದ ಜಿಲ್ಲಾಧ್ಯಕ್ಷ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಮತ್ತು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಕನ್ನಡ ಸಾಹಿತಿಗಳು, ಸಾಂಸ್ಕೃತಿಕ ಯಾತ್ರಾರ್ತಿಗಳಿಗೆ ಕನ್ನಡ ಭವನ ಉಚಿತ ವಸತಿ ವ್ಯವಸ್ಥೆ ಒದಗಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕನ್ನಡ ಹಾಗೂ ಸಾಹಿತ್ಯದ ಬೆಳವಣಿಗೆಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಹಿರಿಯ ಸಾಹಿತಿ ನಾಗೇಶ್ ಕಾಲೂರು ಚುಟುಕು ಸಾಹಿತ್ಯದ ವಿಮರ್ಶೆ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಕನ್ನಡ ಭವನದ ಸ್ಥಾಪಕ ಸಂಚಾಲಕಿ ಸಂಧ್ಯಾರಾಣಿ ಟೀಚರ್, ಕನ್ನಡ ಭವನ ಕೇಂದ್ರ ಸಮಿತಿಯ ಉಪಾಧ್ಯಕ್ಷ ಕೆ.ಪಿ.ರಾಜೇಶ್ ಚಂದ್ರ ಉಪಸ್ಥಿತರಿದ್ದರು.
ವಿವಿಧ ಪ್ರಶಸ್ತಿ ಪ್ರದಾನ
ಕಾಸರಗೋಡಿನ ಕನ್ನಡ ಭವನದ ಕನ್ನಡ ಪಯಸ್ವಿನಿ ಪ್ರಶಸ್ತಿ-೨೦೨೫ನ್ನು ಬೊಳ್ಳಜಿರ ಬಿ.ಅಯ್ಯಪ್ಪ, ಎಂ.ಎ.ರುಬೀನಾ, ಬಿ.ಜಿ.ಅನಂತಶಯನ, ಭಾರದ್ವಾಜ್ ಕೆ.ಆನಂದತೀರ್ಥ, ನಾಗೇಶ್ ಕಾಲೂರು, ಕೊಟ್ಟುಕತ್ತಿರ ಯಶೋದ ಪ್ರಕಾಶ್, ತೆನ್ನೀರ ಟೀನಾ ಚಂಗಪ್ಪ, ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ಚಂದನ್ ನಂದರಬೆಟ್ಟು, ಬೊಟ್ಟೋಳಂಡ ನಿವ್ಯ ದೇವಯ್ಯ ಹಾಗೂ ಕನ್ನಡ ಭವನದ ಭರವಸೆಯ ಬೆಳಕು ಪ್ರಶಸ್ತಿಯನ್ನು ಯೋಗಪಟು ಬಿ.ಕೆ.ಸಿಂಚನ ಅವರಿಗೆ ಪ್ರದಾನ ಮಾಡಲಾಯಿತು.
ಹಿರಿಯ ಸಾಹಿತಿ ಪಿ.ವಿ.ಪ್ರದೀಪ್ ಕುಮಾರ್, ಜಯಾನಂದ ಪೆರಾಜೆ, ಡಾ.ಶಾಂತ ಪುತ್ತೂರು, ವಿರಾಜ್ ಅಡೂರು, ಡಾ.ಕೊಳ್ಚಪ್ಪೆ ಗೋವಿಂದ ಭಟ್, ರೇಖಾ ಎಸ್.ರಾವ್, ಡಾ.ಹೇಮಂತ್ ಕುಮಾರ್, ಕೆ.ಪಿ.ರಾಜೇಶ್‌ಚಂದ್ರ, ವಸಂತ್ ಕೆರೆಮನೆ ಅವರಿಗೆ ಕೊಡಗು ಜಿಲ್ಲಾ ಸಾಹಿತ್ಯ ಪ್ರಶಸ್ತಿ-೨೦೨೫ ನೀಡಿ ಗೌರವಿಸಿದರು. ಅಲ್ಲದೆ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರಿಗೆ ಗಡಿನಾಡ ಚೇತನ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಅಜ್ಜಿಕುಟ್ಟೀರ ಭವ್ಯ ಬೋಪಣ್ಣ ಅವರ ದೇವನೆಲೆರ ಭೀರ್ಯ ಹಾಗೂ ಲೇಖಕಿ ತೆನ್ನಿರ ಟೀನಾ ಚಂಗಪ್ಪ ಅವರ ಮನದಾಳದ ಹೆಜ್ಜೆ ಕೃತಿಗಳು ಬಿಡುಗಡೆ ಮಾಡಲಾಯಿತು.