ನ.1ರಿಂದ ರಾಷ್ಟ್ರೋತ್ಥಾನದಲ್ಲಿ ಕನ್ನಡ ಪುಸ್ತಕ ಹಬ್ಬ; 37 ದಿನ ನಡೆಯುವ 5ನೇ ಉತ್ಸವ

book
Published on

ಬೆಂಗಳೂರು: ನ.1 ರಿಂದ 37 ದಿನಗಳ ಕಾಲ ನಡೆಯಲಿರುವ ರಾಷ್ಟ್ರೋತ್ಥಾನ ಸಾಹಿತ್ಯದ 5ನೇ ಕನ್ನಡ ಪುಸ್ತಕ ಹಬ್ಬ ನಡಯಲಿದೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥರಾದ ಕೆ.ಎಸ್.ನಾರಾಯಣ ತಿಳಿಸಿದ್ದಾರೆ. 2021ರಿಂದ ಆರಂಭವಾಗಿರುವ ಕನ್ನಡ ಪುಸ್ತಕ ಹಬ್ಬದ 5ನೇ ಆವೃತ್ತಿ ನ.1 ರಿಂದ ಡಿಸೆಂಬರ್ 7ರ ವರೆಗೆ ಒಟ್ಟು 37 ದಿನಗಳ ಕಾಲ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಮೈಸೂರು ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುಸ್ತಕ ಹಬ್ಬವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ ಸ್ಥಾಪಕ ಡಾ.ಆರ್. ಬಾಲಸುಬ್ರಮಣ್ಯಂ, ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಭಾಗವಹಿಸಲಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. 37 ದಿನದ ಹಬ್ಬವು ಬೆಳಗ್ಗೆ 10 ರಿಂದ ರಾತ್ರಿ 9.00ರ ವರೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಶೇ.10 ರಿಂದ ಶೇ.50ರ ವರೆಗಿನ ರಿಯಾಯಿತಿಯಲ್ಲಿ ಪುಸ್ತಕಗಳು ದೊರೆಯಲಿವೆ. ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ಲೋಕಾರ್ಪಣ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಮುಖ್ಯಸ್ಥರಾದ ಬಿ.ಎ.ಸುಬ್ರಹ್ಮಣ್ಯ ಹಾಗೂ ಪ್ರಧಾನ ಸಂಪಾದಕರಾದ ವಿಘ್ನೇಶ್ವರ ಭಟ್ಟರು ಇದ್ದರು.

ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟಣೆಗಳು

1965ರಲ್ಲಿ ಪ್ರಾರಂಭವಾದ ರಾಷ್ಟ್ರೋತ್ಥಾನ ಪರಿಷತ್ತಿನ ಮೊದಲ ಚಟುವಟಿಕೆಯಾದ ರಾಷ್ಟ್ರೋತ್ಥಾನ ಸಾಹಿತ್ಯ ಕಳೆದ 60 ವರ್ಷಗಳ ನಿರಂತರ ಕಾರ್ಯನಿರ್ವಹಣೆಯಲ್ಲಿ ಇದುವರೆಗೂ 306 ಪುಸ್ತಕಗಳನ್ನು ಪ್ರಕಟಿಸಿದೆ. ಇತಿಹಾಸ, ರಾಷ್ಟ್ರೀಯತೆ, ಸಂಸ್ಕೃತಿ, ವ್ಯಕ್ತಿತ್ವವಿಕಾಸ, ಜೀವನಚರಿತ್ರೆಗಳು, ವ್ಯಕ್ತಿಚಿತ್ರಗಳು, ಪರಿಸರ, ಯೋಗ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಆರ್ಥಿಕತೆ ಹೀಗೆ ಹಲವು ವಿಷಯ-ಕ್ಷೇತ್ರಗಳಿಗೆ ಸಂಬಂಧಿಸಿ ಈ ಪ್ರಕಟಣೆಗಳನ್ನು ತರಲಾಗಿದೆ. ಇವುಗಳಲ್ಲದೆ, ಭಾರತದ ಇತಿಹಾಸ-ಪರಂಪರೆ-ಮಹಾಕಾವ್ಯಗಳು-ಪುರಾಣಗಳು-ಕಲೆ-ಸಾಹಿತ್ಯ ಸೇರಿದಂತೆ ಎಲ್ಲ ಜೀವನಕ್ಷೇತ್ರಗಳಿಗೆ ಸಂಬಂಧಿಸಿದ ಮಹಾಪುರುಷರನ್ನು ಮಕ್ಕಳಿಗೆ ಪರಿಚಯಿಸುವುದಕ್ಕಾಗಿ ರೂಪಿಸಲಾದ ಭಾರತ-ಭಾರತಿ ಪುಸ್ತಕ ಸಂಪದ ಯೋಜನೆಯಲ್ಲಿ, ಮೊದಲ ಹಂತದಲ್ಲಿ, ಪ್ರೊ. ಎಲ್. ಎಸ್. ಶೇಷಗಿರಿರಾಯರ ಸಂಪಾದಕತ್ವದಲ್ಲಿ 510 ಪುಸ್ತಕಗಳನ್ನು ಪ್ರಕಟಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net