

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಶಿಕ್ಷಣ ಪ್ರಸಾರ ಸಮಿತಿ, ರಾಷ್ಟ್ರೊತ್ಥಾನ ಸಾಹಿತ್ಯ ವತಿಯಿಂದ ಇಲ್ಲಿನ ರಾಮನಗರದ ನಿವೇದಿತಾ, ಆದರ್ಶ ಬಾಲಿಕಾ ಪ್ರೌಢ ಶಾಲೆಯಲ್ಲಿ ಜ. 17ರಿಂದ ಮೂರು ದಿನಗಳ ಕಾಲ ಕನ್ನಡ ಪುಸ್ತಕ ಹಬ್ಬ-2025 ಏರ್ಪಡಿಸಲಾಗಿದೆ ಎಂದು ಶಾಲೆ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 17ರಂದು ಬೆಳಗ್ಗೆ 10.30ಕ್ಕೆ ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ ಸಮಾರಂಭಕ್ಕೆ ಚಾಲನೆ ನೀಡುವರು. ಅತಿಥಿಯಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಆಗಮಿಸಲಿದ್ದಾರೆ. ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ರವರೆಗೆ ನಡೆಯಲಿದೆ ಎಂದರು.
ಪುಸ್ತಕ ಪ್ರದರ್ಶನ, ಮಾರಾಟದ ಜತೆಗೆ ಸಾರ್ವಜನಿಕರು, ಲೇಖಕರೊಂದಿಗೆ ಸಂವಾದ ಸಹ ನಡೆಯಲಿದೆ. ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಜ. 17ರಂದು ಭಾರತೀಯ ನೃತ್ಯ, ಜ. 18ರಂದು ಕುಮಾರ ಮರಡೂರ ಅವರಿಂದ ಗಾಯನ ಹಾಗೂ ಜ. 19ರಂದು ತಾಳ ಮದ್ದಳೆ ಪ್ರದರ್ಶನ ನಡೆಯಲಿದೆ. ಧಾರವಾಡದಲ್ಲಿ ಮೊದಲ ಬಾರಿಗೆ ಪುಸ್ತಕ ಹಬ್ಬ ಏರ್ಪಡಿಸಿದ್ದು, 10 ಸಾವಿರಕ್ಕಿಂತ ಹೆಚ್ಚಿನ ಪುಸ್ತಕಗಳು ಸುಮಾರು 45 ಮಳಿಗೆಗಳಲ್ಲಿ ಪ್ರದರ್ಶನವಾಗಲಿವೆ ಎಂದರು.
ರಾಷ್ಟ್ರೊತ್ಥಾನ ಸಾಹಿತ್ಯ ಪ್ರಕಟಣೆಗಳ ಜತೆಗೆ ಇತರ ಪ್ರಕಾಶನಗಳ ಪ್ರಕಟಣೆಗಳೂ ಸಿಗಲಿವೆ. ಈ ಹಬ್ಬದಲ್ಲಿ ಶೇ. 30ರವರೆಗೆ ರಿಯಾಯಿತಿ ದೊರೆಯಲಿದೆ. ಯುವಕರಲ್ಲಿ ಓದಿನ ಹವ್ಯಾಸ ಹುಟ್ಟಿಸುವ ನಿಟ್ಟಿನಲ್ಲಿ ಈ ಹಬ್ಬ ಏರ್ಪಡಿಸಲಾಗಿದೆ. ಮಕ್ಕಳು, ಶಿಕ್ಷಕರು, ಪಾಲಕರು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಬ್ಬದ ಪ್ರಯೋಜನ ಪಡೆಯಬೇಕು ಎಂದರು.
ಶುದ್ಧ ರಾಷ್ಟ್ರೀಯ ದೃಷ್ಟಿ ಮೂಡಿಸುವುದು, ಭಾರತದ ನೈಜ ಇತಿಹಾಸ ಪರಿಚಯಿಸುವುದು, ವಿವಿಧ ಸಾಹಿತ್ಯ ಪ್ರಕಾರಗಳ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ, ಮೌಲ್ಯಗಳನ್ನು ಜನರಲ್ಲಿ ಬೇರೂರಿಸುವ ಉದ್ದೇಶದಿಂದ ರಾಷ್ಟ್ರೊತ್ಥಾನ ಸಾಹಿತ್ಯ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಪುಸ್ತಕ ಹಬ್ಬ ಏರ್ಪಡಿಸಲಾಗುತ್ತಿದೆ. ಈ ಅವಕಾಶ ಇತರ ಜಿಲ್ಲೆ ಜನರಿಗೂ ಸಿಗಲಿ ಎಂಬ ದೃಷ್ಟಿಯಿಂದ ಎಲ್ಲ ಕಡೆಗಳಲ್ಲಿ ಪುಸ್ತಕ ಹಬ್ಬ ಏರ್ಪಡಿಸಲಾಗುತ್ತಿದೆ ಎಂದರು.
ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದ ಪ್ರಾಚಾರ್ಯೆ ಡಾ. ಅನಿತಾ ರೈ., ವಿನಾಯಕ ಭಟ್, ಇತರರು ಇದ್ದರು.