

ಭಟ್ಕಳ: ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉದ್ಘಾಟನೆಯಾಗಿ 23 ವರ್ಷಗಳು ಕಳೆದಿವೆ. ಆದರೆ, 11ನೇ ಸಾಹಿತ್ಯ ಸಮ್ಮೇಳನ ಆಚರಿಸುತ್ತಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ತಪ್ಪದೇ ಸಮ್ಮೇಳನ ನಡೆಸುವಂತಾಗಬೇಕು. ಇದಕ್ಕೆ ಬೇಕಾದ ಶಾಶ್ವತ ವ್ಯವಸ್ಥೆ ಕಲ್ಪಿಸುತ್ತೇನೆ ಎಂದು ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.
ತಾಲೂಕಿನ ಅಳ್ವೆಕೋಡಿಯಲ್ಲಿ ಮಂಗಳವಾರ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ, ತಾಲೂಕಿನಲ್ಲಿ ಕನ್ನಡ ಭವನ ಇಲ್ಲ ಎನ್ನುವದು ದುಃಖದ ಸಂಗತಿ. ಮೊದಲು ಜಿಲ್ಲೆಯಲ್ಲಿ, ನಂತರ ಎಲ್ಲ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. 30 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಮಟ್ಟದ ಕನ್ನಡ ಸಮ್ಮೇಳನವನ್ನು ಸರ್ಕಾರ ಆಯೋಜಿಸಿದೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸರ್ಕಾರದಿಂದ ಅನುದಾನ ಬಂದಿಲ್ಲ ಎನ್ನುವ ಸಂಗತಿ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಅನುದಾನ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.
ಸಾಹಿತ್ಯ ಕ್ಷೇತ್ರದಲ್ಲಿ ಭಟ್ಕಳದ ಮಲ್ಲಿಗೆಯ ಕಂಪು ರಾಜ್ಯ ಮಟ್ಟದಲ್ಲಿ ಪಸರಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಸಚಿವರನ್ನು ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.