

ಮಂಡ್ಯ: ಕಿತ್ತೂರು ರಾಣಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ರಾಣಿ ಅಬ್ಬಕ್ಕ ಅವರಂತಹ ದಿಟ್ಟ ಮಹಿಳೆಯರು ಆಳಿದ ಈ ನೆಲದಲ್ಲಿ ಹೆಣ್ಣು ಭ್ರೂಣ ಹತ್ಯೆ ಘಟನೆ ಕೇಳಿದರೆ ಮನಸ್ಸಿಗೆ ಅತೀವ ಬೇಸರ ಮೂಡಿಸುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ವಿಷಾಧಿಸಿದರು.
ನಗರದ ಗಾಂಧಿಭವನದಲ್ಲಿ ಕನ್ನಡ ಸೇನೆ ಸಂಘಟನೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಾವೇಶ, ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಣ್ಣು ತಾಯಿಯಾಗಿ ಹಾಗೂ ಸಹೋದರಿಯಾಗಿ ಬೇಕು. ಆದರೆ ಮಗಳು ಬೇಡ ಎಂಬ ಮನೋಭಾವ ಬೆಳೆದಿರುವುದು ದುರದೃಷ್ಟಕರ. ಇದು ನಮ್ಮ ನೆಲದ ಸಂಸ್ಕೃತಿಯಲ್ಲ. ನಮ್ಮದು ಹೆಣ್ಣನ್ನು ಭೂಮಿಗೆ ಹೋಲಿಕೆ ಮಾಡಿರುವ ಸಂಸ್ಕೃತಿ ಎನ್ನುವುದನ್ನು ಮರೆಯಬಾರದು. ಭ್ರೂಣ ಹತ್ಯೆಯಂತಹ ಅನಿಷ್ಟ ಪದ್ಧತಿಗೆ ಗಂಡನ ಮನೆಯವರು ಕಾರಣರಾಗಿರಬಹುದು. ಇದರಿಂದ ಸಂಕಷ್ಟ ಅನುಭವಿಸುವವಳು ಮಾತ್ರ ಮಹಿಳೆಯೇ ಆಗಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದರು.
ಶೇ.82ರಷ್ಟು ಪರಿಪೂರ್ಣವಾಗಿ ಕನ್ನಡವನ್ನೇ ಉಸಿರಾಡುವ ಜಿಲ್ಲೆ ಮಂಡ್ಯದಲ್ಲಿ ಕನ್ನಡ ಶಾಲೆಯನ್ನು ಉಳಿಸಿ ಬೆಳೆಸಿ ಎಂಬ ಕೂಗು ಎದ್ದಿದೆ. ಆದರೆ ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿ ಮಾಡಿದರೆ ಎಲ್ಲರೂ ಆಕರ್ಷಿತರಾಗುತ್ತಾರೆ ಎಂಬ ಮನೋಭಾವ ಏಕೆ ಯಾರಲ್ಲಿಯೂ ಮೂಡಿಲ್ಲ ಎಂದು ಪ್ರಶ್ನಿಸಿದ ಅವರು, ಮಂಡ್ಯದಲ್ಲಿ ಅಪ್ಪಟ ಕನ್ನಡ ನೆಲವಾದ ಹೋರಾಟ, ಜನಪದ ಎಲ್ಲವೂ ಮೇಳೈಸಿದೆ. ಆದರೆ ಇಂತಹ ಸಕ್ಕರೆಯ ನೆಲದಲ್ಲಿ ಮೈಕ್ರೋ ಫೈನಾನ್ಸ್ ಅವರ ಹಾವಳಿಯಿಂದಾಗಿ ಮಹಿಳೆಯರು ನೇಣಿಗೆ ಶರಣಾಗುತ್ತಿರುವ ನೋವಿನ ಸಂಗತಿ, ಪ್ರತಿಯೊಬ್ಬ ಮಹಿಳೆಗೂ ನೈತಿಕ ಬೌದ್ಧಿಕ ಶಕ್ತಿ ತುಂಬುವುದೇ ಮಹಿಳಾ ಆಯೋಗದ ಕೆಲಸವಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ತಾಯಿ ಎನ್ನುವುದೇ ದೈವಿಕ ಶಕ್ತಿ. ಮನೆಯ ಒಳಗೆ ಹೊರಗೆ ಸಮಾಜ ಆರೋಗ್ಯವಾಗಿರಬೇಕಾದರೆ ಮೊದಲು ಮಹಿಳೆ ಆರೋಗ್ಯಕರವಾಗಿರಬೇಕು. ಒಬ್ಬ ವ್ಯಕ್ತಿ ಪರಿಪೂರ್ಣನಾಗಲು ಮಾತೃ ಭಾಷೆಯೇ ಎಷ್ಟು ಮುಖ್ಯವೋ ಅದನ್ನು ಕಲಿಸುವ ಮಾತೃವು ಅಷ್ಟೇ ಪ್ರಧಾನವಾಗಿರುತ್ತಾರೆ. ಆದ್ದರಿಂದ ಎಲ್ಲರೂ ಹೆಣ್ಣನ್ನು ಗೌರವಿಸುವ ಮೂಲಕ ಸಂತತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗೋಣ ಎಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ರವಿಕುಮಾರ್ ಗಣಿಗ, ಕನ್ನಡ ಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೃಪೇಂದ್ರಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಹಂತೇಶ್, ಸಂಚಾಲಕ ರಾಜೇಂದ್ರ, ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಕಾರ್ಯದರ್ಶಿ ಎಂ.ಮಂಜುನಾಥ್, ಮಂಡಿಬೆಟ್ಟಹಳ್ಳಿ ಮಂಜುನಾಥ್, ದೇವಮ್ಮ, ಸೌಭಾಗ್ಯಾ, ಪವಿತ್ರಾ ನಾಗರಾಜು, ಸತೀಶ್ ಸೂನಗಹಳ್ಳಿ, ರಾಘವೇಂದ್ರ, ಪ್ರಜ್ವಲ್, ಪ್ರಸನ್ನ, ವೇಣು ಇತರರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಮನೋಹರ್, ಡಾ.ನರೇಂದ್ರಬಾಬು, ಡಾ.ರವಿಕುಮಾರ್, ನಯೀಂ, ರಾಮಕೃಷ್ಣ, ಭಾಸ್ಕರ್, ಉಷಾರಾಣಿ, ರಾಜಣ್ಣ, ನಾಗೇಶ್, ರವಿಕುಮಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.