

ಬೆಳಗಾವಿ: ನಗರದ ಸಾಹಿತ್ಯ ಭವನದ ಸಭಾಭವನದಲ್ಲಿ ಡಾ. ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರ ಪ್ರಥಮ ಸಭೆ ಬುಧವಾರ ನೆರವೇರಿತು. ಸದಸ್ಯರಾದ ರವಿ ಭಜಂತ್ರಿ, ರಾಮಚಂದ್ರ ಕಟ್ಟಿ, ಶ್ರೀರಂಗ ಜೋಶಿ, ಚಂದ್ರಯ್ಯ ಯರಗಟ್ಟಿಮಠ, ಸುನಂದಾ ಎಮ್ಮಿ, ದೀಪಿಕಾ ಚಾಟೆ, ನಿರ್ಮಲಾ ಬಟ್ಟಲ ಸಭೆಯಲ್ಲಿ ಹಾಜರಿದ್ದರು.
ಕನ್ನಡ ಪ್ರಾಧಿಕಾರ ಪ್ರತಿ ತಿಂಗಳೂ ಕನ್ನಡ ಚಟುವಟಿಕೆ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದೆ. ಜತೆಗೆ ಕರ್ನಾಟಕ ಸರ್ಕಾರ ಕಳೆದ ಅಕ್ಟೋಬರ್ 31ರಿಂದ ಈ ವರ್ಷದ ಅಕ್ಟೋಬರ್ 31ರ ವರೆಗೆ ‘ಕನ್ನಡ ಕಾಯಕ ವರ್ಷ’ ಎಂದು ಘೋಷಿಸಿದೆ.
ಈ ವರ್ಷದಲ್ಲಿ ಕನ್ನಡ ಅನುಷ್ಠಾನಕ್ಕೆ ತರುವ ಕುರಿತಂತೆ ಮುಖ್ಯಮಂತ್ರಿಗಳು 6 ಪುಟಗಳ ಮಾರ್ಗಸೂಚಿ ಕೊಟ್ಟಿದ್ದು, ಆ ಮಾರ್ಗಸೂಚಿಯಂತೆ ಎಲ್ಲ ಸದಸ್ಯರು ಕಾರ್ಯನಿರ್ವಹಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.