

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಗಡಿನಾಡು ಕಾಸರಗೋಡಿನಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.
ಕಾಸರಗೋಡಿನ ವಿವಿಧ ಇಲಾಖೆಗಳ ನಾಮಫಲಕ ಕನ್ನಡದಲ್ಲೂ ಅಳವಡಿಸಬೇಕು, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಎಲ್ಲ ಅರ್ಜಿ ನಮೂನೆ ಕನ್ನಡದಲ್ಲಿ ಪೂರೈಸಬೇಕು, ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಒದಗಿಸಲಾಗಿರುವ ಎಲ್ಲ ಸವಲತ್ತುಗಳನ್ನು ಜಾರಿಗೊಳಿಸಬೇಕು ಮೊದಲಾದ ಬೇಡಿಕೆಯುಳ್ಳ ಮನವಿಯನ್ನು ವಿವಿಧ ಇಲಾಖೆಗಳಿಗೆ ಸಲ್ಲಿಸಲಾಯಿತು.
ಕನ್ನಡ ಜಾಗೃತಿ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ಜಯನಾರಾಯಣ, ಅಧ್ಯಕ್ಷ ಯೋಗೀಶ್ ಕೋಟೆಕಣಿ, ಕಾರ್ಯದರ್ಶಿ ಶ್ರೀಕಾಂತ್ ಕಾಸರಗೋಡು, ಉಪಾಧ್ಯಕ್ಷ ಭರತ್, ಜತೆಕಾರ್ಯದರ್ಶಿ ದಿವಾಕರ ಪಿ.ಅಶೋಕನಗರ, ಜಯಾನಂದ ಕುಮಾರ್ ಹೊಸದುರ್ಗ, ಮೋಹನ ರಾವ್, ನಗರಸಭಾ ಸದಸ್ಯೆ ವೀಣಾ ಅರುಣ್ ಶೆಟ್ಟಿ ನಿಯೋಗದಲ್ಲಿ ಉಪಸ್ಥಿತರಿದ್ದರು.
ಕಾಸರಗೋಡು ನಗರಸಭಾ ಕಾರ್ಯದರ್ಶಿ ಪಿ.ಎ.ಜಸ್ಟಿನ್, ಕಾಸರಗೋಡು ಗ್ರಾಮಾಧಿಕಾರಿ ಲೀಲಾವತಿ, ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಸರಗೋಡು ಜಿಲ್ಲಾ ವಾರ್ತಾ, ಮಾಹಿತಿ ಅಧಿಕಾರಿ ಮಧುಸೂದನ್ ಅವರಿಗೆ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ನಿಯೋಗ ಪ್ರತ್ಯೇಕ ಮನವಿ ಸಲ್ಲಿಸಿತು.