

ಬೆಂಗಳೂರು ಗ್ರಾಮಾಂತರ : ಜಿಲ್ಲಾಮಟ್ಟದ ಎಲ್ಲ ಇಲಾಖೆಗಳಲ್ಲಿ ಅಧಿಕಾರಿಗಳು ಕನ್ನಡ ಭಾಷೆಗೆ ಪ್ರಾತಿನಿಧ್ಯತೆ ನೀಡಿ, ಆಡಳಿತ ನಡೆಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.
ದೇವನಹಳ್ಳಿ ತಾಲೂಕು ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ನಮ್ಮತನವನ್ನು ಮೊದಲು ಅರಿಯಬೇಕು. ಕನ್ನಡದ ಕೆಲಸ ನಮ್ಮ ಕೆಲಸವಾಗಿದ್ದು, ಕನ್ನಡತನ ಎಂಬುದು ನಮ್ಮಿಂದಲೇ ಆರಂಭವಾದರೆ ಕನ್ನಡದ ಗರಿಮೆ, ಗೌರವ ಹೆಚ್ಚುತ್ತದೆ ಎಂದು ಹೇಳಿದರು.
ಅನ್ಯ ಭಾಷೆಯ ವ್ಯಾಮೋಹ ತೊರೆದು, ಕನ್ನಡವನ್ನು ಪ್ರೀತಿಸಬೇಕು. ಮುಂದಿನ ಪೀಳಿಗೆಗೆ ಭಾಷೆಯ ಮೂಲಕ ನಾಳೆಗಳನ್ನು ನಿರ್ಮಿಸಲು ಎಲ್ಲ ಇಲಾಖೆಗಳು ಮುಂದಾಗಬೇಕು ಎಂದು ಸಲಹೆ ನೀಡಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸೇರಿ ಎಲ್ಲ ಇಲಾಖೆಗಳ ಅಂತರ್ಜಾಲದಲ್ಲಿ ಹೆಚ್ಚು ಕನ್ನಡ ಭಾಷೆ ಬಳಸುತ್ತಿರುವುದು ಸಂತಸದ ವಿಷಯ ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಗತ್ಯ ಸೌಕರ್ಯ ಒದಗಿಸಿ ದತ್ತು ಪಡೆದಿರುವ ಸರ್ಕಾರಿ ಶಾಲೆಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆ ಪರಿಶೀಲನೆ ನಡೆಸಿದ ಅಧ್ಯಕ್ಷರು ಈ ಶಾಲೆಗಳಲ್ಲಿ ಕನ್ನಡ ಭಾಷೆ ಬಳಸಲಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿರುವ ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಕಡೆಗಣಿಸಿರುವ ಬಗ್ಗೆ ಕನ್ನಡಪರ ಸಂಘಟನೆಗಳು ದೂರು ನೀಡಿದ್ದು, ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಮೊದಲ ಆದ್ಯತೆಯಲ್ಲಿ ಬಳಸಬೇಕು ತಪ್ಪಿದಲ್ಲಿ, ಅಂಗಡಿ ಪರವಾನಗಿ ರದ್ದುಪಡಿಸಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಯಾಂಕ್‌ಗಳಲ್ಲಿ ಅನ್ಯ ಭಾಷೆಯವರೇ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ, ಬ್ಯಾಂಕ್ ಚಲನ್, ಎಟಿಎಂ ಸೇರಿ ಎಲ್ಲ ಸೇವೆಗಳು ಕನ್ನಡದಲ್ಲೇ ನೀಡಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗೆ ಕನ್ನಡ ಭಾಷೆಯಲ್ಲಿಯೇ ತರಬೇತಿ ನೀಡುವ ಮೂಲಕ ಹೆಚ್ಚಿನ ಜನರು ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ ನುರಿತ ತಜ್ಞರಿಂದ ತರಬೇತಿ ನೀಡುವಂತೆ ತಿಳಿಸಿದರು.
ನ್ಯಾಯಾಲಯಗಳಲ್ಲಿ ವಾದ-ಪ್ರತಿವಾದ ಹಾಗೂ ತೀರ್ಪು ಕನ್ನಡದಲ್ಲೇ ಜರುಗಬೇಕು, ಕನ್ನಡದಲ್ಲಿ ವಾದ-ಪ್ರತಿವಾದ ಹಾಗೂ ತೀರ್ಪು ನೀಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಇತ್ತೀಚೆಗೆ ಹೆಚ್ಚು ಹೆಚ್ಚು ಕನ್ನಡದಲ್ಲಿ ತೀರ್ಪು ಪ್ರಕಟವಾಗುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಕನ್ನಡ ಕಾಯಕ ವರ್ಷಾಚರಣೆ: ಸರ್ಕಾರ 2020ರ ನ.1ರಿಂದ 2021ರ ಅ.31ರವರೆಗೆ ಕನ್ನಡ ಕಾಯಕ ವರ್ಷ ಎಂದು ಘೋಷಿಸಿದ್ದು, ಇದರ ಅಂಗವಾಗಿ ಕನ್ನಡ ಅಭಿಯಾನಕ್ಕಾಗಿ ಪ್ರತಿ ತಿಂಗಳು ಒಂದೊಂದು ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಕನ್ನಡ ಕಟ್ಟುವ ಕಾರ್ಯಕ್ಕೆ ಅಧಿಕಾರಿಗಳು ಕೈಜೋಡಿಸಿ ಎಂದು ನಾಗಾಭರಣ ತಿಳಿಸಿದರು.
ಅಭಿಯಾನಕ್ಕೆ ಬೆಂಬಲ ನೀಡಿ: ತಮಿಳು ಹಾಗೂ ತೆಲುಗು ಭಾಷೆಯ ನಡುವೆ ನಾವಿಂದು ಬದುಕುತ್ತಿದ್ದೇವೆ. ಕನ್ನಡದ ನೆಲದಲ್ಲಿ ಈ ತಾರತಮ್ಯ ಹೋಗಲಾಡಿಸಲು ಕನ್ನಡ ಕಾಯಕ ವರ್ಷಾಚರಣೆ ಹಿನ್ನೆಲೆಯಲ್ಲಿ ಕನ್ನಡ ಅಭಿಯಾನ ಆರಂಭಿಸಲಾಗಿದೆ. ಎಲ್ಲ ಅಧಿಕಾರಿಗಳು ಸರ್ಕಾರಿ ಕಚೇರಿ ಕಾರ್ಯಗಳಲ್ಲಿ ಪ್ರತಿನಿತ್ಯ ಕನ್ನಡ ಬಳಸುವ ಮೂಲಕ ಈ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಡಾ.ಕಿಶೋರ್ ಹೇಳಿದರು.