

ಶಿವಮೊಗ್ಗ: ವಿಮಾನ ನಿಲ್ದಾಣದ ಡಿಜಿಟಲ್ ಮಾಹಿತಿ ಫಲಕದಲ್ಲಿ ಕನ್ನಡ ಭಾಷೆಯನ್ನು ಅಳವಡಿಸಲಾಗಿದೆ. ಕನ್ನಡದಲ್ಲಿ ಮಾಹಿತಿ ಬಿತ್ತರ ಆಗುತ್ತಿರುವ ಫೋಟೋವನ್ನು ರಾಜ್ಯ ಮೂಲಸೌಕರ್ಯ ಖಾತೆ ಸಚಿವ ಎಂ.ಬಿ.ಪಾಟೀಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದ ಡಿಜಿಟಲ್ ಮಾಹಿತಿ ಫಲಕದಲ್ಲಿ ಕನ್ನಡ ಭಾಷೆ ಕಡೆಗಣಿಸಲಾಗಿದೆ. ಹಿಂದಿ ಭಾಷೆಗೆ ಆದ್ಯತೆ ನೀಡಲಾಗಿದೆ ಎಂದು ಕೆಲ ನೆಟ್ಟಿಗರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಹಿತಿ ಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಕೆಲ ಸಂಘಟನೆಗಳು ಒತ್ತಾಯಿಸಿದ್ದವು.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವರು, ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಕುರಿತು ಮಾತನಾಡುವೆ ಎಂದು ಟ್ವೀಟ್ ಮಾಡಿದ್ದರು. ಈ ನಡುವೆ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆಯು ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಎದುರಿನಲ್ಲೇ ಪ್ರತಿಭಟನೆ ನಡೆಸಿತ್ತು. ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಕನ್ನಡ ಭಾಷೆಯ ಮಾಹಿತಿ ಹಾಗೂ ಕುವೆಂಪು ಅವರ ನಾಮಫಲಕ ಅನಾವರಣ ಮಾಡಬೇಕು ಎಂದು ಆಗ್ರಹಿಸಿತ್ತು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸಚಿವರು, ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿನ ಮಾಹಿತಿ ಫಲಕ. ನೆಲ-ಜಲ-ಭಾಷೆಯ ವಿಷಯದಲ್ಲಿ ನಮ್ಮದು ಒಗ್ಗಟ್ಟಿನ ಧ್ವನಿ ಎಂಬ ಸಂದೇಶವನ್ನು ಫೋಟೋ ಜತೆಗೆ ಸಚಿವರು ಟ್ವೀಟ್ ಮಾಡಿದ್ದಾರೆ. ಸಚಿವರ ಈ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.