ಸಿಎಜಿ ಆಕ್ಷೇಪಕ್ಕೆ ಸಂಸ್ಕೃತಿ ಇಲಾಖೆ ನಿರ್ಲಿಪ್ತ

Kannada And Culture department 7 JUN 20
Published on

ಬೆಂಗಳೂರು: ಧನಸಹಾಯ ನೀಡಿಕೆಯಲ್ಲಿ ಅವ್ಯವಸ್ಥೆ, ಸಾಂಸ್ಕೃತಿಕ ಭವನ ನಿರ್ಮಾಣದಲ್ಲಿ ಅವ್ಯವಹಾರ ಹಾಗೂ ಪುಸ್ತಕ ಮುದ್ರಣದಲ್ಲಿ ಗೊಂದಲ ಸೇರಿ ಅನೇಕ ಆಕ್ಷೇಪಣೆಗಳನ್ನೆತ್ತಿದ್ದ ಭಾರತದ ಲೆಕ್ಕಪರಿಶೋಧಕರು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಭಿಪ್ರಾಯ ತಿಳಿಸಿಲ್ಲ ಎಂದು ಸರ್ಕಾರದ ಉಪಕಾರ್ಯದರ್ಶಿ ಆಕ್ಷೇಪಿಸಿದ್ದಾರೆ.

ಈ ಹಿಂದೆಯೇ ಪತ್ರ ಬಂದಿತ್ತಾದರೂ ನಡುವೆ ಕರೊನಾ ಸೋಂಕು ಕಾಣಿಸಿಕೊಂಡ ಕಾರಣಕ್ಕೆ ಅತ್ತಕಡೆ ಸಿಬ್ಬಂದಿ ಗಮನ ಹರಿಸಿರಲಿಲ್ಲ. ಇತ್ತೀಚೆಗೆ ಸಭೆಯಲ್ಲಿ ಭಾಗವಹಿಸಿ ಇಲಾಖೆಯಿಂದ ನೀಡಬೇಕಾದ ಪ್ರತಿಕ್ರಿಯೆಯನ್ನು ನೀಡಲಾಗಿದೆ. | ಎಸ್. ರಂಗಪ್ಪ                ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಈ ಬಗ್ಗೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿರುವ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ ಉಪಕಾರ್ಯದರ್ಶಿ, ವರದಿಗೆ ಸಂಬಂಧಿಸಿ ಇಲಾಖೆಯ ಟಿಪ್ಪಣಿ ಸಲ್ಲಿಸುವಂತೆ 2019ರ ಡಿ.9 ಹಾಗೂ 2020ರ ಮಾ.3ಕ್ಕೆ ಪತ್ರ ಬರೆಯಲಾಗಿತ್ತು. ಇಲ್ಲಿವರೆಗೆ ತಮ್ಮಿಂದ ಉತ್ತರ ಲಭಿಸಿಲ್ಲ. ತ್ವರಿತವಾಗಿ ಟಿಪ್ಪಣಿ ಸಲ್ಲಿಸುವಂತೆ ಆರ್ಥಿಕ ಇಲಾಖೆಯಿಂದ ತಿಳಿಸಲಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮೇ 22ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಜನಪ್ರತಿನಿಧಿಗಳ ಮೇಲೆ ಆರೋಪ: ಇಲಾಖೆಯ ಧನಸಹಾಯ ಯೋಜನೆ ಅಧ್ವಾನವಾಗಲು ಜನಪ್ರತಿನಿಧಿಗಳೇ ಕಾರಣ ಎಂಬುದನ್ನು ಸಿಎಜಿ ವರದಿ ತಿಳಿಸಿತ್ತು. 2013-14ರಿಂದ 2017ರವರೆಗೆ ಧನಸಹಾಯ ನೀಡಿಕೆ ವೇಳೆ ನಿಯಮಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸದೆ ನೇರವಾಗಿ ಜನಪ್ರತಿನಿಧಿಗಳಿಂದ ಶಿಫಾರಸು ಪಡೆದವರಿಗೆ 8.69 ಕೋಟಿ ರೂ. ನೀಡಲಾಗಿದೆ. ಸೂಕ್ತ ದಾಖಲೆಗಳಿಲ್ಲದೆ ಅಧಿಕಾರಿಗಳು ತಿರಸ್ಕರಿಸಿದ್ದ 8 ಸಂಸ್ಥೆಗೆ ಜನಪ್ರತಿನಿಧಿಗಳು ಶಿಫಾರಸು ಮಾಡಿ 1 ಕೋಟಿ ರೂ. ಕೊಡಿಸಿದ್ದಾರೆ. ನಿಯಮಗಳಿಗೆ ವಿರುದ್ಧವಾಗಿದ್ದರೂ ಈ ಸಂಸ್ಥೆಗಳಿಗೆ ಹಣ ನೀಡಿರುವುದು, ಅನುದಾನ ಬಳಕೆ ಬಗ್ಗೆ ಅನುಮಾನ ಮೂಡಿಸುತ್ತದೆ. ಒಂದು ವರ್ಷದಲ್ಲಿ ಒಂದು ಸಂಸ್ಥೆಗೆ ಒಂದೇ ಬಾರಿ ಧನಸಹಾಯ ನೀಡಬೇಕು. ಆದರೆ ಅನೇಕ ಸಂಸ್ಥೆಗಳಿಗೆ ಎರಡು ಬಾರಿ ಹಣ ನೀಡಿರುವುದು ಕರ್ತವ್ಯದ ಗಂಭೀರ ಲೋಪ ಎಂದು ಸಿಎಜಿ ಹೇಳಿತ್ತು.

ಮನೆ, ಛತ್ರ, ಕ್ರೀಡಾಂಗಣಕ್ಕೂ ಹಣ!: ಸಾಂಸ್ಕೃತಿಕ ಭವನ ನಿರ್ವಿುಸಲು ನೀಡಿದ ಹಣಕಾಸಿನ ನೆರವಿನಲ್ಲಿ ಮನೆ, ಮದುವೆ ಛತ್ರ, ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿಎಜೆ ಹೇಳಿತ್ತು. ಇಲಾಖೆ ವತಿಯಿಂದ 174 ಸಾಂಸ್ಕೃತಿಕ ಭವನಕ್ಕೆ ಹಣ ನೀಡಿದ್ದು, 22 ಮಾತ್ರ ಮಾರ್ಗಸೂಚಿಗೆ ಅನುಗುಣವಾಗಿವೆ. ಉಳಿದ 130ರಲ್ಲಿ ಮನೆ, ಕ್ರೀಡಾಂಗಣದ ಜತೆಗೆ ಉಗ್ರಾಣ ಕೊಠಡಿ, ಕಚೇರಿ ಇದ್ದರೆ ಕೆಲವು ಭವನಗಳೇ ಇರಲಿಲ್ಲ, ಅನೇಕವು ಬಳಕೆಯಾಗದೆ ಸಮಾಜಘಾತಕ ಚಟುವಟಿಕೆಗೆ ತುತ್ತಾಗುತ್ತವೆ ಎಂದಿತ್ತು. ಸಾಂಸ್ಕೃತಿಕ ನೀತಿ ಅನುಷ್ಠಾನ ಮಾಡುವಲ್ಲಿ ವಿಳಂಬ, ಕನ್ನಡ ಶಾಸ್ತ್ರೀಯ ಭಾಷಾ ಉನ್ನತ ಅಧ್ಯಯನ ಕೇಂದ್ರ ಕುರಿತ ಜಟಾಪಟಿ, ಕನ್ನಡ ಭಾಷೆ ಕಲಿಕೆ ಅಧಿನಿಯಮ ಜಾರಿ ಮಾಡದಿರುವುದು, ಸರ್ಕಾರದಿಂದ ಧನಸಹಾಯ ಪಡೆದ ಚಲನಚಿತ್ರಗಳು ಬಿಡುಗಡೆಯೇ ಆಗದಿರುವುದು, ಇಲಾಖೆಯಿಂದ ಮುದ್ರಿತ ಪುಸ್ತಕಗಳು ಜನರನ್ನು ತಲುಪದೆ ಇರುವ ವಿಚಾರವನ್ನೂ ಸಿಎಜಿ ವರದಿಯಲ್ಲಿ ತಿಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net