

ಬೆಂಗಳೂರು: ಕನ್ನಡದ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಸರ್ಕಾರ ಎಂದೂ ಹಿಂದೆ ಉಳಿಯುವುದಿಲ್ಲ. ಬದಲಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರಶಸ್ತಿಗಳನ್ನು ನಿರೀಕ್ಷಿಸದೇ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪುರಸ್ಕರಿಸುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರವಾಗಿ ಮಾಡುತ್ತಾ ಬಂದಿದೆ. ಇಂದು 18 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿದ್ದೇವೆ. ಇದರಲ್ಲಿ ಮೂರು ಪ್ರಶಸ್ತಿಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿದ್ದು, ಉಳಿದ ಪ್ರಶಸ್ತಿಗಳಿಗೆ 5 ಲಕ್ಷ ರೂ. ಒಳಗೊಂಡಿವೆ. ಆದರೆ, ಪುರಸ್ಕೃತರ ಸಾಧನೆಗೆ ಈ ಹಣ ಸಮವಲ್ಲ. ಇದು ಕನ್ನಡ ಸಂಸ್ಕೃತಿಯ ಕಾರ್ಯಕ್ಕೆ ಸಲ್ಲಿಸುತ್ತಿರುವ ಗೌರವ ಎಂದರು.
ಬಹಳ ಮಂದಿ ಸಂಸ್ಕೃತಿ ವಿಚಾರದಲ್ಲಿ ಸಾಧನೆ ಮಾಡುತ್ತಲೇ ಇರುತ್ತಾರೆ. 2000 ವರ್ಷಗಳ ಇತಿಹಾಸ ಇರುವ ಕನ್ನಡದ ಸಾಂಸ್ಕೃತಿಕ ಸಂಪತ್ತು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, ಜಾಗತಿಕ ಇತಿಹಾಸದಲ್ಲಿ ಕನ್ನಡ ನಾಡಿನ ಚರಿತ್ರೆಗೆ ಮಹತ್ವದ ಸ್ಥಾನವಿದೆ. ವಿವಿಧ ಸಂಸ್ಕೃತಿಗಳ, ಉಪಭಾಷೆಗಳ, ಸಂಪ್ರದಾಯಗಳ, ಪರಂಪರೆಗಳ ಹಾಗೂ ಪ್ರಾದೇಶಿಕತೆಗಳ ಸಂಪನ್ನಭರಿತ ನಾಡು ಕರ್ನಾಟಕ. ವೈವಿಧ್ಯಮಯ ಸಂಸ್ಕೃತಿ ಮತ್ತು ವಿಶಿಷ್ಟ ಸಂಪ್ರದಾಯಗಳಿಂದ ಕೂಡಿದ ಈ ನಾಡು ಅನೇಕ ಜನಪದ ಹಾಗೂ ಶಾಸ್ತ್ರೀಯ ಸಂಸ್ಕೃತಿಗಳ ತವರೂರು. ಇವುಗಳ ಪೋಷನೆ ಹಾಗೂ ಸಂವರ್ಧನೆ ನಾಡಿನ ಪ್ರಗತಿಯ ದ್ಯೋತಕ ಎಂದರು.
ಪ್ರಶಸ್ತಿ ಪುರಸ್ಕೃತರ ವಿವರ:
ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್ (ಶ್ರೀ ಭಾಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ), ಬಸಪ್ಪ ಎಚ್. ಭಜಂತ್ರಿ (ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ), ಬೇಗಂ ಪರ್ವೀನ್ ಸುಲ್ತಾನಾ (ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ) ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 10 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಕೆ. ರಾಜಕುಮಾರ್ (ಸಂಗೊಳ್ಳಿ ರಾಯಣ್ಣ), ಹೇಮಾ ಪಟ್ಟಣಶೆಟ್ಟಿ (ಅಕ್ಕಮಹಾದೇವಿ), ಸ. ರಘುನಾಥ (ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ), ವೈ.ಸಿ. ಭಾನುಮತಿ (ದಾನಚಿಂತಾಮಣಿ ಅತ್ತಿಮಬ್ಬೆ), ಜೆ. ಲೋಕೇಶ್ (ಬಿ.ವಿ. ಕಾರಂತ), ಕೆ. ನಾಗರತ್ನಮ್ಮ (ಗುಬ್ಬಿವೀರಣ್ಣ), ಡಾ. ಎಲ್. ಹನುಮಂತಯ್ಯ (ಸಿದ್ದಲಿಂಗಯ್ಯ ಸಾಹಿತ್ಯ), ಎಂ.ಜೆ. ಕಮಲಾಕ್ಷಿ (ವರ್ಣಶಿಲ್ಪಿ ವೆಂಕಟಪ್ಪ), ಎಂ. ರಾಮಮೂರ್ತಿ (ಜಕಣಾಚಾರಿ), ನಿಂಗಪ್ಪ ಭಜಂತ್ರಿ (ಜಾನಪದಶ್ರೀ), ದೊಡ್ಡ ಗವಿಬಸಪ್ಪ (ಜಾನಪದಶ್ರೀ), ಅನಂತ ತೇರದಾಳ (ನಿಜಗುಣಪುರಂದರ), ಎ.ವಿ. ಪ್ರಸನ್ನ (ಕುಮಾರವ್ಯಾಸ), ಪದ್ಮಿನಿ ರವಿ (ಶಾಂತಲಾ ನಾಟ್ಯ), ಎಸ್. ಮಲ್ಲಣ್ಣ (ಸಂತ ಶಿಶುನಾಳ ಷರೀಫ) ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 5 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರು, ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಇದ್ದರು.
ಕೋಟ್:
ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿದ್ದವನು ನಾನು. ಸಾಹಿತ್ಯದ ವಿದ್ಯಾರ್ಥಿ ಅಲ್ಲದಿದ್ದರೂ, ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುವವನು. ಕನ್ನಡ ಕರ್ನಾಟಕದಲ್ಲಿ ಸಾರ್ವಭೌಮ್ ಭಾಷೆ ಆಗಬೇಕು ಎಂಬ ಬದ್ಧತೆ ಇಟ್ಟುಕೊಂಡು ನಾನು ಕಾವಲು ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.
- ಸಿಎಂ ಸಿದ್ದರಾಮಯ್ಯ