ಪಾರಂಪರಿಕ ಸಾಹಿತ್ಯ ಉಳಿಸಿ ಬೆಳೆಸೋಣ: ವೈದ್ಯ ಡಾ.ಕೆ.ಚಂದ್ರಶೇಖರ್ ಕರೆ

Kannada Akshara Jatra Mandya
Published on

ಮಂಡ್ಯ: ಸಾಮಾಜಿಕ ಜಾಲತಾಣ ಸಾಹಿತ್ಯವನ್ನು ನುಂಗುತ್ತಿದೆ. ಆದ್ದರಿಂದ ನಮ್ಮ ಪಾರಂಪರಿಕ ಸಾಹಿತ್ಯವನ್ನು ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕೆಂದು ಸಾಹಿತಿ ಹಾಗೂ ವೈದ್ಯ ಡಾ.ಕೆ.ಚಂದ್ರಶೇಖರ್ ಮನವಿ ಮಾಡಿದರು.

ನಗರದ ಗಾಂಧಿಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ 7ನೇ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಯುವ ಜನರಿಗೆ ಫೇಸ್‌ಬುಕ್ ಹಾಗೂ ಪಾಸ್‌ಬುಕ್ ಹೊರತುಪಡಿಸಿದರೆ ಸಾಹಿತ್ಯದ ಬುಕ್ ಬಗ್ಗೆ ಆಸಕ್ತಿಯೇ ಇಲ್ಲ. ಅವರಲ್ಲಿ ಸಾಹಿತ್ಯದ ಬಗ್ಗೆ ಚಿಂತನೆ ಹೆಚ್ಚುವಂತೆ ಮಾಡಬೇಕಾಗಿರುವುದು ಶಾಲಾ ಹಾಗೂ ಕಾಲೇಜು. ಶಿಕ್ಷಕರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಆಧುನಿಕತೆಯ ಜತೆಗೆ ಕನ್ನಡ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಬೇಕೆಂದು ಕರೆ ನೀಡಿದರು.

ಪಾಲಕರು ಸಹ ಮಕ್ಕಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ವ್ಯಾಮೋಹವನ್ನು ಹೆಚ್ಚಿಸುತ್ತಿದ್ದಾರೆ. ಬೇರೆ ಭಾಷೆ ಕಲಿಯುವುದು ತಪ್ಪಲ್ಲ. ಆದರೆ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡದಿರುವುದು ದೊಡ್ಡ ತಪ್ಪು. ಮನೆಗಳಲ್ಲಿ ಧಾರವಾಹಿಗಳು, ರಿಯಾಲಿಟಿ ಷೋಗಳ ಮೇಲೆ ಜನರಿಗಿರುವ ಆಸಕ್ತಿ ಸಾಹಿತ್ಯದ ಮೇಲೆ ಇಲ್ಲ. ಪ್ರತಿಯೊಬ್ಬ ಕನ್ನಡಿಗನೂ ಸಹ ಸಾಹಿತ್ಯ ಕನ್ನಡದ ಮೇಲೆ ಅಭಿಮಾನ ಹೆಚ್ಚಿಸಿಕೊಂಡಾಗ ಭಾಷೆ ಮತ್ತು ಸಾಹಿತ್ಯ ಬೆಳೆಯಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಈ. ಗಂಗಾಧರಸ್ವಾಮಿ ಮಾತನಾಡಿದರು. ಅಕ್ಷರ ಜಾತ್ರೆ ಸಮ್ಮೇಳನಾಧ್ಯಕ್ಷ ಸಾಹಿತಿ ಈ.ಗಂಗೇಗೌಡ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಲುವೇಗೌಡ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಣ್ಣ, ಉದ್ಯಮಿ ಡಾ.ವಿ.ಎಸ್.ಶ್ರೀಕಾಂತ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net