ಜೂ.1 ರಂದು ಕನ್ನಡ ಕಾರ್ಯಕರ್ತರ ಶಿಬಿರ

ASHOK KUMAR
ASHOK KUMAR
Published on

ರಾಯಚೂರು ಕನ್ನಡ ಮಿತ್ರ ಕೂಟದಿಂದ ಜೂ.1 ರಂದು ನಗರದ ಕನ್ನಡ ಭವನದಲ್ಲಿ ಕನ್ನಡ ಕಾರ್ಯಕರ್ತರ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರಕ್ಕೆ ಸಾಕಷ್ಟು ಕನ್ನಡಿಗರು ಈಗಾಗಲೇ ನೊಂದಾಯಿಸಿಕೊಂಡಿದ್ದು, 100ಕ್ಕೂ ಅದಿಕ ಜನ ಶಿಬಿರದಲ್ಲಿ ಭಾಗವಹಿಸಲಿದ್ದಾರೆಂದು ಕೂಟದ ಅಧ್ಯಕ್ಷ ಹಾಗೂ ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಬಿರದಲ್ಲಿ ಅನೇಕ ಭಾಷಾತಜ್ಞರು, ಅಭಿಮಾನಿಗಳು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಉದ್ಘಾಟಿಸಲಿದ್ದಾರೆ. ಶ್ರೀ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ತಹಸೀಲ್ದಾರ್ ಸುರೇಶ ವರ್ಮಾ ಅವರು ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನದ ಅಧ್ಯಕ್ಷ ಹೆಚ್.ಹೆಚ್. ಮ್ಯಾದಾರ ಅವರು ವಹಿಸಿಕೊಳ್ಳಲಿದೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪಾಧ್ಯಕ್ಷ ಸಾಜೀದ್ ಸಮೀರ್, ಜಿಲ್ಲಾ ಕಾರಾಗೃಹ ಅಧೀಕ್ಷಕಿ ಅನಿತಾ ಹಿರೇಮನಿ, ತೆಲಂಗಾಣ ರಜ್ಯದ ಕೃಷ್ಣ ಮಂಡಲದ ಕ್ಷೇತ್ರ ಶಿಕ್ಷಣಾಧಿಕಾರಿ ನಿಜಾಮುದ್ದಿನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಉದ್ಘಾಟನೆ ನಂತರ ಕನ್ನಡ ಜಾಗರತಿ ಗೋಷ್ಠಿ ನಡೆಯಲಿದೆ.

ಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ದಾನಮ್ಮ ಸುಭಾಷಚಂದ್ರ ವಹಿಸಲಿದ್ದಾರೆ. ಗೋಷ್ಠಿಯಲ್ಲಿ ಇಂದಿನ ಕನ್ನಡ ಭಾಷೆಯ ಬಳಕೆ ಹಾಗೂ

ಅಳಿವು, ಉಳಿವಿನ ಕುರಿತು ನಿವೃತ್ತ ಪ್ರಾಚಾರ್ಯ ಗೋಪಾಲನಾಯಕ ವಿಷಯ ಮಂಡಿಸಲಿದ್ದಾರೆ. ಜತೆಗೆ ಕನ್ನಡಕ್ಕಾಗಿ ನಾವೆಷ್ಟು ಸಮರ್ಥರು? ಎಂಬ ವಿಷಯದ ಕುರಿತು ವಿರುಪಾಪುರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ರಮಾದೇವಿ ಶಂಭೋಜಿ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಿತ್ರಕೂಟದ ಸಹ ಕಾರ್ಯದರ್ಶಿ ಲಕ್ಷ್ಮಣಕುಮಾರ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ನಡುಮನಿ ಉಪಸ್ಥಿತರಿರಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಮಣ್ಣ ಮ್ಯಾದಾರ, ರಾಮಲಿಂಗಪ್ಪ, ರಫೀಕ್ ಅಹ್ಮದ್, ಇಮಾಮುದ್ದಿನ್, ಬಶೀರ್ ಅಹ್ಮದ್ ಹೊಸಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net