

ಬೆಂಗಳೂರು: ಶಾಲೆಗಳಲ್ಲಿ ನಾಡಗೀತೆ ಹಾಡುವಿಕೆ ಕಡ್ಡಾಯಗೊಳಿಸಿ 20 ವರ್ಷಗಳ ಹಿಂದೆಯೇ ಹೊರಡಿಸಿರುವ ಆದೇಶ ಈವರೆಗೂ ಅನುಷ್ಠಾನಗೊಳ್ಳದಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ವಿಷಾದ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಶೀರ್ಷಿಕೆಯ ನಾಡಗೀತೆಯನ್ನು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಿ 20 ವರ್ಷಗಳು ಕಳೆದಿವೆ. ಆದರೆ ಇಂದಿಗೂ ಈ ಆದೇಶ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರೆ ಬರೆದಿರುವ ಬಿಳಿಮಲೆ, 2004ರಲ್ಲಿ ಸರ್ಕಾರವು ರಾಷ್ಟ್ರೀಯ ಏಕತೆಯನ್ನು ಅತ್ಯಂತ ಸುಂದರವಾಗಿ ಅಭಿವ್ಯಕ್ತಿಸಿರುವ ಕುವೆಂಪು ಅವರ ಕವನವನ್ನು ನಾಡಗೀತೆಯಾಗಿ ಘೋಷಿಸಿ ಮಾರ್ಗಸೂಚಿ ನಿಗದಿಪಡಿಸಿತ್ತು. ಆದರೆ ಅದು ಇಂದಿಗೂ ಅನುಷ್ಠಾನಗೊಳ್ಳದಿರುವುದು ನಮ್ಮ ವ್ಯವಸ್ಥೆಯ ಸೋಲನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
ವಿಶೇಷವಾಗಿ ಖಾಸಗಿ ಶಾಲೆಗಳು ನಾಡಗೀತೆಗೆ ಯಾವುದೇ ಮಾನ್ಯತೆ ನೀಡದೆ ಅನಿಯಂತ್ರಿತ ಆಡಳಿತವನ್ನು ನಡೆಸುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಬೇಕಿದೆ. ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಾಗಿ ಹಾಡುವ ಸ್ವನಿಯಂತ್ರಿತ ವ್ಯವಸ್ಥೆ ರೂಪಿಸಲು ಕ್ರಮ ವಹಿಸುವಂತೆ ಶಿಕ್ಷಣ ಸಚಿವರನ್ನು ಬಿಳಿಮಲೆ ಆಗ್ರಹಿಸಿದ್ದಾರೆ.