

ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿ ಭಾಷಿಕರಿಂದ ಬಸ್ ನಿರ್ವಾಹಕರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಮನು ಬಳಿಗಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಒತ್ತಾಯ ಮಾಡಿ, ಬಸ್ ನಿರ್ವಾಹಕ ಮಹದೇವ ಮಲ್ಲಪ್ಪ ಹುಕ್ಕೇರಿ ಮೇಲೆ ಬಾಳೇಕುಂದ್ರಿ ಗ್ರಾಮದ ಪ್ರಯಾಣಿಕರು ದೈಹಿಕ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕ ಸೇವೆಯಲ್ಲಿರುವ ನಿರ್ವಾಹಕರ ಮೇಲೆ ಈ ರೀತಿ ಭಾಷಾ ವಿಷಯದಲ್ಲಿ ಹಲ್ಲೆ ನಡೆಸಿರುವುದು ಆತಂಕಕಾರಿ ಘಟನೆ. ಕರ್ನಾಟಕದಲ್ಲಿ ಕನ್ನಡವೇ ಅಧಿಕೃತ ಭಾಷೆಯಾಗಿದ್ದು, ಇಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ಕನ್ನಡ ಭಾಷೆಯಲ್ಲಿ ವ್ಯವಹರಿಸುವುದು ಆದ್ಯ ಕರ್ತವ್ಯವಾಗಿದೆ. ಸಾರಿಗೆ ಸಂಸ್ಥೆ ನೌಕರರ ಮೇಲೆ ಈ ರೀತಿ ದೌರ್ಜನ್ಯ ಎಸಗಿರುವುದು ಖಂಡನೀಯ ಎಂದು ಹೇಳಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಅತೀವ ಕಾಳಜಿಯುಳ್ಳ ಮುಖ್ಯಮಂತ್ರಿಯವರು ಈ ಘಟನೆ ಬಗ್ಗೆ ಗಮನಹರಿಸಿ, ಹಲ್ಲೆ ನಡೆಸಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ಸಾರ್ವಜನಿಕ ಸೇವೆಯಲ್ಲಿರುವ ಸಾರಿಗೆ ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸಬೇಲು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.