

ಬೆಂಗಳೂರು: ಹಲವಾರು ಪಾಲಕರು ಹಾಗೂ ಸೋಫಿಯಾ ಶಾಲೆಯ ಮಂಡಳಿಯು 8ನೇ ತರಗತಿಯಲ್ಲಿ ಕನ್ನಡ ಭಾಷೆ ಬೋಧಿಸಲು ವಿರೋಧಿಸುತ್ತಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶಾಲೆಗೆ ನೋಟಿಸ್ ನೀಡಿದ್ದು, ಪತ್ರ ತಲುಪಿದ ಮೂರು ದಿನದೊಳಗಾಗಿ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.
ಈ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ ಅವರು ಸೋಫಿಯಾ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ.
ಶಾಲೆಯ 50ಕ್ಕೂ ಪಾಲಕರು ಕನ್ನಡ ವಿಷಯ ಬೋಧಿಸದಂತೆ ಶಾಲೆಯ ಆಡಳಿತ ಮಂಡಳಿಗೆ ಪತ್ರ ಬರೆದಿದ್ದು, ಇದಕ್ಕೆ ಶಾಲೆಯ ಆಡಳಿತ ಮಂಡಳಿ ಪ್ರತಿಕ್ರಿಯಿಸಿ ಈ ಕುರಿತು ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಈ ವಿಷಯದಲ್ಲಿ ನಿಮ್ಮ ಬೆಂಬಲ ಬಹಳ ಮುಖ್ಯ ಎಂದು ತಿಳಿಸಿ ವಿದ್ಯಾರ್ಥಿಗಳ ಪಾಲಕರಿಂದ ಪತ್ರ ಬರೆಸಿ ಶಿಕ್ಷಣ ಇಲಾಖೆಗೆ ಕಳುಹಿಸಿದ್ದಾರೆಂಬ ವಿಷಯವು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.
ಕನ್ನಡ ಭಾಷಾ ಕಲಿಕೆ ಅಧಿನಿಯಮ 2015 ರನ್ವಯ ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು. ಆದರೆ, ಕನ್ನಡ ಭಾಷೆಯ ಬಗ್ಗೆ ನಿರ್ಲಕ್ಷ ವಹಿಸುವ ಶಾಲೆಗಳ ಅನುಮತಿಯನ್ನು ರದ್ದು ಪಡಿಸಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.