ಕನ್ನಡ ಅಭಿವೃದ್ಧಿಗೆ ಮೂರು ಅಭಿಯಾನ ; ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾಹಿತಿ

8-klr-3
Published on

ಕೋಲಾರ : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾದ ಮೇಲೆ ಕನ್ನಡದ ಅಭಿವೃದ್ಧಿಗಾಗಿ 5 ಅಭಿಯಾನಗಳನ್ನು ಅನುಷ್ಠಾನಕ್ಕೆ ತಂದಿದ್ದು ಈ ವರ್ಷ ಕನ್ನಡ ಮನಸ್ಸುಗಳ ಸಹಕಾರದಿಂದ ಮೂರು ಅಭಿಮಾನ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಿರ್ದೇಶಕ ಟಿ.ಎಸ್.ನಾಗಾಭರಣ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅನ್ಯ ಭಾಷಿಗರ ಮೇಲೆ ಕನ್ನಡವನ್ನು ಬಲವಂತವಾಗಿ ಹೇರುವುದಕ್ಕಿಂತ ನಮ್ಮಲ್ಲಿ ಒಬ್ಬರಾಗಿ ಬದುಕಿ ಎಂಬ ಸಂದೇಶದೊಂದಿಗೆ ಕನ್ನಡ ಕಲಿಸುವುದರಿಂದ ಪರಿವರ್ತನೆ ಸಾಧ್ಯ ಎಂದರು.

ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವಂತೆ ಜಾಗೃತಿ ಮೂಡಿಸಬೇಕು, ಮಸಿ ಬಳಿಯುವುದರಿಂದ ಪ್ರಯೋಜನವಿಲ್ಲ ಎಂದು ಕನ್ನಡಪರ ಸಂಘಟನೆಗಳಿಗೆ ಸೂಚ್ಯವಾಗಿ ಹೇಳಿದರು. ಈಗಾಗಲೆ ನಡೆದ 5 ಅಭಿಯಾನಗಳಿಂದ ತಕ್ಕ ಮಟ್ಟಿಗೆ ಕನ್ನಡ ಅಭಿವೃದ್ಧಿಗೆ ಸಹಕಾರಿಯಾಗಿದೆ, ಕನ್ನಡಕ್ಕೆ ವರನಟ ಡಾ.ರಾಜಕುಮಾರ್ ಕೊಡುಗೆ ಅಪಾರವಾದ್ದರಿಂದ ಏ.24ರ ಡಾ.ರಾಜ್ ಜನ್ಮದಿನವನ್ನು ಕನ್ನಡ ಅಭಿಮಾನ ದಿನವನ್ನಾಗಿ ಗ್ರಾಹಕರಲ್ಲಿ ಕನ್ನಡ ಬಳಕೆ, ಮೇ 1ರ ಕಾರ್ಮಿಕ ದಿನವನ್ನು ಕಾರ್ಮಿಕ ವಲಯದಲ್ಲಿ ಕನ್ನಡ, ಜು.1ರ ವೈದ್ಯರ ದಿನವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಪ್ರತಿದಿನ ಆಡಳಿತದಲ್ಲಿ ಕನ್ನಡ ಬಳಕೆಯಾಗಬೇಕು, ಅರ್ಜಿ, ಕಡತಗಳ ವಿಲೇವಾರಿ, ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಕರ್ತವ್ಯವಾಗಬೇಕು. ಎಲ್ಲ ಜಿಲ್ಲಾಧಿಕಾರಿಗಳು ಕೆಡಿಪಿ ಸಭೆಗಳಲ್ಲಿ ಆದ್ಯತೆ ಮೇರೆಗೆ ಕನ್ನಡ ಅನುಷ್ಠಾನ ಕುರಿತು ಪ್ರಗತಿ ಪರಿಶೀಲಿಸಬೇಕು ಎಂದು ಸೂಚಿಸಿದರು. ಜಾಗೃತಿ ಸಮಿತಿಗಳ ಕರ್ತವ್ಯ: ಜಿಲ್ಲೆಯಲ್ಲಿ ಸರ್ಕಾರ ನೇಮಿಸಿರುವ ಜಾಗೃತಿ ಸಮಿತಿ ಸದಸ್ಯರು ಕಾಲ ಕಾಲಕ್ಕೆ ಜಿಲ್ಲಾ ಪ್ರವಾಸ ಕೈಗೊಂಡು ಲೋಪಗಳಿದ್ದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು, ವರದಿಯನ್ನು ಪ್ರಾಧಿಕಾರಕ್ಕೆ ತಲುಪಿಸಬೇಕು ಎಂದರು.

ಕನ್ನಡ ಕಾಯಕ ವರ್ಷ: ಸಿಎಂ ಬಿ.ಎಸ್.ಯಡಿಯೂರಪ್ಪ ನ.1ರಿಂದ ಮುಂದಿನ ಅಕ್ಟೋಬರ್‌ವರೆಗೆ ಕನ್ನಡ ಕಾಯಕ ವರ್ಷವಾಗಿ ಘೋಷಿಸಿದ್ದಾರೆ. ಕನ್ನಡಪರ ಕೆಲಸಕ್ಕೆ ಪ್ರತಿಷ್ಠೆ ಬೇಕಾಗಿಲ್ಲ, ಆಹ್ವಾನಕ್ಕೆ ನಿರೀಕ್ಷೆ ಮಾಡದೆ, ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಕನ್ನಡ ಶ್ರೀಮಂತಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ಅನುದಾನ ಕೊಡಿಸಿ: ಕನ್ನಡ ಕಲಿಕೆಗೆ ಅಗತ್ಯ ಸಹಕಾರ ನೀಡಲು ಜಿಲ್ಲಾಡಳಿತ ಬದ್ಧ. ಅನುದಾನ ಕೊರತೆಯಿರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಕೊಡಿಸಿ ಎಂದು ಡಿಸಿ ಡಾ.ಆರ್.ಸೆಲ್ವಮಣಿ ಮನವಿ ಮಾಡಿದರು. ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ನಿಗಾವಹಿಸಲು ಸಮಿತಿ ರಚಿಸಲಾಗುವುದು. ಕನ್ನಡ ಜಾಗೃತಿ ಸಮಿತಿ ಸದಸ್ಯರು ಸಮಸ್ಯೆ ಬಗ್ಗೆ ಗಮನಕ್ಕೆ ತಂದಲ್ಲಿ ಬಗೆಹರಿಸುವೆ. ಅನ್ಯಭಾಷಿಗರಿಗೆ ಕನ್ನಡ ಕಲಿಕೆಗೆ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದರು.

ಇಲಾಖೆಗಳಲ್ಲಿನ ವ್ಯವಸ್ಥೆ ಬಳಸಿಕೊಂಡು ಶಿಬಿರ ಏರ್ಪಡಿಸಬಹುದೆಂದು ನಾಗಾಭರಣ ಉತ್ತರಿಸಿದರೆ, ಕನ್ನಡ ಕಲಿಕೆಗೆ ವಿಶೇಷ ಅನುದಾನ ಬೇಕಾಗಿಲ್ಲ, ಇಲಾಖೆಗಳಲ್ಲಿ ಲಭ್ಯವಿರುವ ಅನುದಾನವೇ ಸಾಕು ಎಂದು ಪ್ರಾಧಿಕಾರದ ಕಾರ್ಯದರ್ಶಿ ಡಾ.ಗುರುಸಿದ್ದಯ್ಯ ತಿಳಿಸಿದರು. ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಬೇಕು, ಸಾರ್ವಜನಿಕ ಸ್ಥಳ, ಹೆದ್ದಾರಿಗಳಲ್ಲಿ ಕನ್ನಡ ಭಾಷೆ ಕಂಡರೆ ಸಾಲದು, ಸರಿಗನ್ನಡ ಬಳಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಸುಧಾರಣೆಗೆ ಕ್ರಮಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಡಾ.ಸರೋಜಿಸಿ ಮಹಿಷಿ ವರದಿ ಪ್ರಕಾರ ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲವೆಂಬ ಆರೋಪ ಕೇಳಿ ಬಂದಿದ್ದು , ಉಲ್ಲಂಸುವವರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಜರುಗಿಸುವಂತೆ ಹೇಳಿದರು. ಜಿಪಂ ಸಿಇಒ ಎನ್.ಎಂ.ನಾಗರಾಜ್, ಕೆಜಿಎಫ್ ಎಸ್ಪಿ ಇಲಾಕಿಯಾ ಕರುಣಾಕರನ್, ಕೋಲಾರ ಎಎಸ್ಪಿ ಜಾಹ್ನವಿ, ಎಸಿ ಸೋಮಶೇಖರ್, ಪ್ರಾಧಿಕಾರದ ಸದಸ್ಯ ಸಿ.ಎ.ಕಿಶೋರ್, ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ರಾಜಪ್ಪ, ರಮೇಶ್, ಶ್ರೀನಿವಾಸ್, ಕನ್ನಡ ಶಕ್ತಿ ಕೇಂದ್ರದ ಜಿಲ್ಲಾಧ್ಯಕ್ಷ ಬಾ.ಹಾ.ಶೇಖರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಉಪಸ್ಥಿತರಿದ್ದರು.

ಮುಂದಿನ ಪೀಳಿಗೆಗೆ ಕನ್ನಡ ಬೇಕು : ಮುಂದಿನ ಪೀಳಿಗೆಗಾಗಿ ಕನ್ನಡ ಕಲಿಕೆ ಅನಿವಾರ್ಯ. ಮಕ್ಕಳು ಮಮ್ಮಿ-ಡ್ಯಾಡಿ ಸಂಸ್ಕೃತಿಗೆ ಮಾರು ಹೋಗಬಾರದು, ಮಮ್ಮಿ ಗ್ರೀಕ್ ಭಾಷೆ, ಸತ್ತವರ ಹೆಣ ಇಡುವ ಜಾಗ ಎಂದರ್ಥ. ಈ ರೀತಿಯ ಭಾಷೆಯನ್ನು ಮಕ್ಕಳು ಕಲಿಯುವುದರಿಂದ ಕನ್ನಡದ ಸಂಸ್ಕೃತಿಗೆ ಭಂಗ ಉಂಟಾಗುತ್ತದೆ ಎಂದು ನಾಗಾಭರಣ ಆತಂಕ ವ್ಯಕ್ತಪಡಿಸಿದರು.

ನಾಮಫಲಕ, ಸಾರ್ವಜನಿಕ ಸ್ಥಳಗಳಲ್ಲಿ ಹಾಕುವ ಜಾಹೀರಾತುಗಳಲ್ಲಿ ಕನ್ನಡ ಇಲ್ಲದಿದ್ದರೆ ಕ್ರಮ ಕೈಗೊಳ್ಳುವ ಅಧಿಕಾರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರಿಗೆ ಇದೆ. ನಿಯಮ ಉಲ್ಲಂಘಿಸಿದರೆ 500 ರಿಂದ 1000 ರೂ. ದಂಡ ವಿಧಿಸಬಹುದು. ಟಿ.ಎಸ್.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net