ಕನ್ನಡ ಸಾಹಿತ್ಯದ ಕೀರ್ತಿ ಹೆಚ್ಚಿಸಿದ ಬಸವಣ್ಣ, ಜಿಲ್ಲಾಡಳಿತದಿಂದ ಸರಳವಾಗಿ ಜಯಂತಿ ಆಚರಣೆ

26-klr-5 Alternative
Published on

ಕೋಲಾರ: ಜಗಜ್ಯೋತಿ ಬಸವಣ್ಣ ರಚಿಸಿದ ವಚನಗಳು ಕನ್ನಡ ಸಾಹಿತ್ಯದ ಕೀರ್ತಿ ಮತ್ತು ಪರಂಪರೆಯನ್ನು ವಿಶ್ವಾದ್ಯಂತ ವಿಸ್ತರಿಸಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ನಗರದ ಹೊರ ವಲಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಸಾಮಾಜಿಕ ಪರಿವರ್ತನೆ, ಸ್ತ್ರೀ ಸಮಾನತೆ, ಅಂತರ್ಜಾತಿ ವಿವಾಹ ಕುರಿತಂತೆ ಬಸವಣ್ಣ ನಡೆಸಿದ ಕ್ರಾಂತಿಕಾರಿ ಹೋರಾಟದಿಂದ ಸಮಾಜದಲ್ಲಿ ಇಂದು ಬದಲಾವಣೆ ಕಂಡು ಬರುತ್ತಿದೆ ಎಂದರು.

ಬಸವಣ್ಣನವರ ವಚನ ಸಾಹಿತ್ಯ ಕುರಿತು ತಾವು ಪ್ರಬಂಧ ಮಂಡಿಸಿ ಪಿಎಚ್‌ಡಿ ಮಾಡಿದ್ದಾಗಿ ನೆನಪು ಮಾಡಿದ ಅವರು, ಬಸವಣ್ಣ ಒಂದು ಜಾತಿ, ಧರ್ಮಕ್ಕೆ ಸೀಮಿತವಾದ ಯುಗ ಪುರುಷರಲ್ಲ, ಹಾಗಾಗಿ ಅವರನ್ನು ಪ್ರತಿಯೊಂದು ಸಮುದಾಯ ಭಕ್ತಿಯಿಂದ ಸ್ಮರಿಸುತ್ತದೆ ಎಂದರು.

ಕರೊನಾದಿಂದ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿಲ್ಲ, ಜಿಲ್ಲಾಡಳಿತದ ಕೊರಿಕೆ ಮೇರೆಗೆ ಜಿಲ್ಲಾದ್ಯಂತ ಬಸವಣ್ಣನವರ ಅನುಯಾಯಿಗಳು ಮನೆಗಳಲ್ಲೇ ಶ್ರದ್ದಾ-ಭಕ್ತಿಯಿಂದ ಜಯಂತಿ ಆಚರಿಸಿದ್ದಾರೆ. ಕರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯ ಜನ ನೀಡಿರುವ ಸಹಕಾರ ಪ್ರಶಂಸನೀಯ, ಈ ಬೆಂಬಲ ಮೇ 3ರವರೆಗೆ ಮುಂದುವರಿಸಬೇಕು, ಕೋಲಾರನ್ನು ಕರೊನಾಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ಹರಿಕಥಾ ವಿದ್ವಾನ್ ಹಾಗೂ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎನ್.ಆರ್.ಜ್ಞಾನಮೂರ್ತಿ ಬಸವಣ್ಣನ ವಚನ ಹಾಡುವ ಜತೆಗೆ ತಾತ್ಪರ್ಯ ಹೇಳಿದರು.

ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net