ಕರವೇಯಿಂದ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ದೀಕ್ಷಾ ಕಾರ್ಯಕ್ರಮ

Narayangouda 1
Published on

ಬೆಳಗಾವಿ: ಕನ್ನಡ ನಾಡು ನುಡಿ ರಕ್ಷಣೆಗೆ ಕಂಕಣಬದ್ಧವಾಗಿ ನಿಲ್ಲುವ ನವಪೀಳಿಗೆಯ ಸುಮಾರು 50 ಸಾವಿರ ಯುವಕ/ಯುವತಿಯರನ್ನು ನಾವು ರಾಜಾದ್ಯಂತ ಸಜ್ಜುಗೊಳಿಸುತ್ತಿದ್ದು, ಅದಕ್ಕೆ ಪೂರಕವಾಗಿ ಕನ್ನಡ ದೀಕ್ಷೆ ಕೊಡುತ್ತಿದ್ದೇವೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.

ನಗರದಲ್ಲಿ ಭಾನುವಾರ ಕರವೇಯಿಂದ ಏರ್ಪಡಿಸಿದ್ದ ಮೊದಲ ಕನ್ನಡ ದೀಕ್ಷಾ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆಗೆ ಬೆಳಗಾವಿ ಸ್ವಾಭಿಮಾನದ ಭೂಮಿ. ಹೀಗಾಗಿ ಇಲ್ಲಿಂದ ನಮ್ಮ ದೀಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ. ಇವತ್ತು 2500ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಇಲ್ಲಿ ದೀಕ್ಷೆ ನೀಡುತ್ತಿದ್ದೇವೆ. ಮುಂದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಈ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.

ಬೆಳಗಾವಿಯಲ್ಲಿ ನ.1ರಂದು ಎಂಇಎಸ್ ಕರಾಳ ದಿನಾಚರಣೆಗೆ ಅವಕಾಶ ಕೊಡಬಾರದು. ನಮ್ಮ ನೆಲದಲ್ಲಿ ಇದ್ದು, ಇಲ್ಲಿ ಬದುಕಿ, ಉಂಡು-ತಿಂದು ರಾಜ್ಯೋತ್ಸವಕ್ಕೆ ದಿನ ಕರಾಳ ದಿನ ಆಚರಿಸುವ ಮೂರ್ಖರು ಬೆಳಗಾವಿಯಲ್ಲಿದ್ದಾರೆ. ಎಂಇಎಸ್ ಈಗ ಜೀವ, ಹಲ್ಲಿಲ್ಲದ ಹಾವಾಗಿದೆ. ಅವರ ಬೇರು ಈಗಾಗಲೇ ಒಣಗಿದೆ. ಇನ್ನೊಂದಿಷ್ಟು ಚಿಗುರಿಸಬೇಕೆಂದು ಕರಾಳ ದಿನದಂತಹ ಪುಂಡಾಟಕ್ಕೆ ಮುಂದಾಗಿದ್ದಾರೆ. ಅವತ್ತು ಬೆಳಗಾವಿಯಲ್ಲಿ ರಣರಂಗವಾಗುವುದು ಬೇಡ. ಅವರಿಗೆ ಅನುಮತಿ ಕೊಡಬಾರದು. ಕೊಟ್ಟಿದ್ದೇ ಆದಲ್ಲಿ ಕರವೇಯಿಂದ ಯಾವ ರೀತಿಯ ಹೋರಾಟವಾಗುತ್ತದೆ ಹೇಳಲಾಗದು. ಅದಕ್ಕೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮತ್ತು ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net