ವಿದ್ಯಾರ್ಥಿ ಹಂತದಲ್ಲೇ ಕನ್ನಡ ಸರಿಯಾಗಿ ಕಲಿಯಬೇಕು

kannada
Published on

ಕುಶಾಲನಗರ:

ವಿದ್ಯಾರ್ಥಿಗಳು 10ನೇ ತರಗತಿ ತಲುಪುದರ ಒಳಗೆ ಕನ್ನಡವನ್ನು ಚೆನ್ನಾಗಿ ಕಲಿಯಬೇಕು ಎಂದು ಸ್ಥಳೀಯ ಅನುಗ್ರಹ ಶಿಕ್ಷಣ ಸಂಸ್ಥೆ ಕನ್ನಡ ವಿಭಾಗದ ಮುಖ್ಯಸ್ಥೆ ಲೀಲಾಕುಮಾರಿ ತೊಡಿಕಾನ ತಿಳಿಸಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರದ ಫಾತಿಮಾ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸೂದನ ರಾಘವಯ್ಯ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿ ದೆಸೆಯಲ್ಲೇ ಕನ್ನಡ ಹಿರಿಮೆ, ಗರಿಮೆ ಬಗ್ಗೆ ಅರಿತುಕೊಂಡು ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವುದು, ಓದುವುದು ಹಾಗೂ ಬರೆಯುವುದು ಅಭ್ಯಾಸ ಮಾಡಿದಾಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಿ, ಬೆಳಸಲು ಸಾಧ್ಯ. ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗಬೇಕು. ಮಕ್ಕಳಲ್ಲಿ ಕನ್ನಡದ ಬಗ್ಗೆ ಯಾವುದೇ ತಾತ್ಸಾರ ಭಾವನೆ ಮೂಡದ ಹಾಗೆ ವಾತಾವರಣ ನಿರ್ಮಾಣವಾಗಬೇಕು. ಕನ್ನಡದ ಬದಲಾಗಿ ಬೇರೆ ಯಾವುದೇ ಭಾಷೆಯಿಲ್ಲ. ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಅದನ್ನು ಬೆಳೆಸುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.

ತುಂಬಾ ಮಕ್ಕಳಿಗೆ ಕಾಲೇಜಿಗೆ ಬಂದರೂ ಕಾಗುಣಿತ ಗೊತ್ತಿರುವುದಿಲ್ಲ. 10ನೇ ತರಗತಿ ಒಳಗೆ ಕನ್ನಡವನ್ನು ಚೆನ್ನಾಗಿ ಅಭ್ಯಾಸ ಮಾಡಿಸಿದಾಗ ಮಾತ್ರ ಉತ್ತಮ ಗುಣಮಟ್ಟದ ಕನ್ನಡ ನಿರೀಕ್ಷೆ ಮಾಡಬಹುದು. ಕನ್ನಡ ಕಲಿತ ಮೇಲೆ ಬೇರೆ ಯಾವುದೇ ಭಾಷೆಯನ್ನು ಕಲಿಯಿರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಅಧಿಯಾ ಅವರನ್ನು ಕಾನ್ವೆಂಟ್ ಒಂದರಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಮಕ್ಕಳಲ್ಲಿ ಕನ್ನಡ ಪ್ರೇಮ ಉತ್ತೇಜಿಸುವ ಉದ್ದೇಶ ಇದರ ಹಿಂದಿದೆ. ಈಗ ಇಲ್ಲಿರುವ ವಿದ್ಯಾರ್ಥಿಗಳು ಮುಂದಿನ ವರ್ಷದಲ್ಲಿ ಈ ರೀತಿಯ ಗೌರವ ಪಡೆಯಲು ಪೈಪೋಟಿ ನಡೆಸುವಂತಾಗಬೇಕು ಎಂದು ಹೇಳಿದರು.

ಫಾತಿಮಾ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಚೇತನಾ, ಕಸಾಪ ಕಾರ್ಯದರ್ಶಿ ಎಸ್. ನಾಗರಾಜ್, ಖಜಾಂಚಿ ಕೆ.ವಿ. ಉಮೇಶ್, ನಿರ್ದೇಶಕರಾದ ಬಿ.ಸಿ. ದಿನೇಶ್, ಎಂ.ಎನ್. ಕಾಳಪ್ಪ, ಸೂದನ ರತ್ನಾವತಿ, ಹೆಬ್ಬಾಲೆ ಹೋಬಳಿ ಕಸಾಪ ಅಧ್ಯಕ್ಷ ಎಂ.ಎನ್. ಮೂರ್ತಿ, ಕಾರ್ಯದರ್ಶಿ ಸುಬ್ರಹ್ಮಣ್ಯ, ಫಾತಿಮಾ ಶಾಲೆಯ ಶಿಕ್ಷಕರಾದ ಸಂತೋಷ್, ಮಂಜುಳಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net