ಕೆಆರ್‌ಎಸ್ ಹಿನ್ನೀರಿನಲ್ಲಿ ಕೆಂಪು ಮಣ್ಣಿಗೆ ಕನ್ನ!

WhatsApp Image 2024-02-22 at 10.27.32 AM (1)
Published on


ಕೆ.ಆರ್.ಸಾಗರ: ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಕೆಂಪು ಮಣ್ಣಿಗೆ ಕನ್ನ ಹಾಕುವವರ ಸಂಖ್ಯೆ ಹೆಚ್ಚುತ್ತಿದ್ದು, ಡ್ಯಾಂಗೆ ಅಪಾಯದ ಭೀತಿ ಎದುರಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಅಣೆಕಟ್ಟೆ ಉತ್ತಮವಾಗಿದ್ದು, ಯಾವುದೇ ಹೂಳು ತುಂಬಿಲ್ಲ ಎಂದು ತಿಳಿದುಬಂದಿದೆ. ಆದರೆ ಹಿನ್ನೀರಿನ ಪ್ರದೇಶದಲ್ಲಿ ‘ಮಣ್ಣು ಮಾಫಿಯಾ’ ಎಗ್ಗಿಲ್ಲದೆ ನಡೆಯುತ್ತಿದೆ. ಅಣೆಕಟ್ಟೆ ಹಿನ್ನೀರಿನಲ್ಲಿ ಯಾವುದೇ ಮಣ್ಣು ತೆಗೆಯಬಾರದು ಎಂಬ ಆದೇಶ ಇದ್ದರೂ ಇಟ್ಟಿಗೆ ಫ್ಯಾಕ್ಟರಿ ಮಾಲೀಕರು ಹಿನ್ನೀರಿನ ಪ್ರದೇಶದಲ್ಲಿ ಕೆಂಪು ಮಣ್ಣನ್ನು ಮಾನಸೋಇಚ್ಛೆ ತೆಗೆದು ಸಾಗಿಸುತ್ತಿದ್ದಾರೆ.

ಮಣ್ಣು ತೆಗೆಯುತ್ತಿರುವ ಮಾಹಿತಿ ತಿಳಿದು ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಂತೆ ವಾಹನಗಳ ಸಮೇತ ಪರಾರಿಯಾಗುವುದು, ಗಾಡಿಗಳನ್ನು ತಡೆದರೆ ಹೊಲಕ್ಕೆ ಮಣ್ಣು ಹಾಕುತ್ತಿರುವುದಾಗಿ ಅಥವಾ ರಾಜಕೀಯ ವ್ಯಕ್ತಿಗಳಿಂದ ಕರೆ ಮಾಡಿಸಿ ಪ್ರಭಾವ ಬಿರುತ್ತಿರುವುದು ಕಂಡುಬಂದಿದೆ. ಇದೆಲ್ಲದರ ನಡುವೆಯೂ ಕಳೆದ ಮೂರಾಲ್ಕು ತಿಂಗಳಲ್ಲಿ ಮಣ್ಣು ತೆಗೆದವರ ವಿರುದ್ಧ ಕೆ.ಆರ್.ನಗರ, ಇಲವಾಲ ಮತ್ತು ಕೆ.ಆರ್.ಸಾಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಅಣೆಕಟ್ಟೆಯ ಹಿನ್ನೀರಿನ ಸುಮಾರು 45 ಕಿ.ಮೀ. ಪ್ರದೇಶ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದರೂ ಸಿಬ್ಬಂದಿ ಕೊರತೆಯಿಂದ ಸಂರಕ್ಷಣೆ ಅಸಾಧ್ಯವಾಗಿದೆ. ಅಣೆಕಟ್ಟೆ ಭದ್ರತೆಗೆ ನಿಯೋಜಿಸಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಕೇವಲ ಅಣೆಕಟ್ಟೆ ಸುರಕ್ಷತೆಗೆ ಮಾತ್ರ ಮೀಸಲಾಗಿದೆ. ಹೀಗಾಗಿ ಸ್ಥಳೀಯ ಪೊಲೀಸರ ಸಹಾಯವನ್ನು ಕಾವೇರಿ ನೀರಾವರಿ ನಿಗಮ ಅವಲಂಬಿಸಬೇಕಾಗಿದೆ.

ಅಪಾಯಕ್ಕೆ ಆಹ್ವಾನ: ಹಿನ್ನೀರಿನ ಪ್ರದೇಶಗಳಲ್ಲಿ ಮಣ್ಣು ತೆಗೆಯುವುದರಿಂದ ಅಣೆಕಟ್ಟೆ ಭರ್ತಿಯಾದ ಸಂದರ್ಭದಲ್ಲಿ ನೀರಿನಲ್ಲಿ ಆಟವಾಡಲು ಹೋಗುವ ಪ್ರವಾಸಿಗರು ಗುಂಡಿಯಾಗಿರುವುದನ್ನು ಅರಿಯದೆ ಪ್ರಾಣಾಪಾಯಕ್ಕೆ ತುತ್ತಾಗುವಂತಾಗಿದೆ. ಇದಕ್ಕೆ ನಿದರ್ಶನವಾಗಿ ಕೆ.ಆರ್.ಸಾಗರ ಹಿನ್ನೀರಿನ ಪ್ರದೇಶಗಳಾದ ವೇಣುಗೋಪಾಲಸ್ವಾಮಿ ದೇವಾಲಯ, ಮೀನಾಕ್ಷಿಪುರ, ಆನಂದೂರು ಬಳಿ ಪ್ರವಾಸಿಗರು ಹಿನ್ನೀರಿನಲ್ಲಿ ಆಟವಾಡಲು ಹೋಗಿ ಹಳ್ಳದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಅನೇಕ ಘಟನೆಗಳು ಜರುಗಿವೆ.

ಈ ಹಿನ್ನೆಲೆಯಲ್ಲಿ ಅಣೆಕಟ್ಟೆ ಹಿನ್ನೀರಿನಲ್ಲಿ ಯಾವುದೇ ವ್ಯಕ್ತಿ ಮಣ್ಣು ತೆಗೆಯದಂತೆ ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರಿವು ಮೂಡಿಸುವ ಅಗತ್ಯ ಇದೆ. ಭಾರಿ ವಾಹನಗಳಾದ ಲಾರಿ, ಜೆ.ಸಿ.ಬಿ., ಟ್ರಾೃಕ್ಟರ್ ಮತ್ತು ಇತರ ವಾಹನಗಳನ್ನು ಬಳಸಿ ಮಣ್ಣು ತೆಗೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.

ಕೆ.ಆರ್.ಸಾಗರ ಅಣೆಕಟ್ಟೆ ಹಿನ್ನೀರಿನ ಪ್ರದೇಶ ಕಾ.ನೀ.ನಿಗಮ ಸೇರಿದ್ದಾಗಿದ್ದು, ಈ ಪ್ರದೇಶಗಳಲ್ಲಿ ಮಣ್ಣು ತೆಗೆಯುವುದು ಕಾನೂನುಬಾಹಿರವಾಗಿದೆ. ಇದರಿಂದ ಅಣೆಕಟ್ಟೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಮಣ್ಣು ತೆಗೆದವರ ವಿರುದ್ಧ ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಾಗಿದೆ. ಮಣ್ಣು ತೆಗೆಯುವುದನ್ನು ತಡೆಗಟ್ಟಲು ಹಿನ್ನೀರು ವ್ಯಾಪ್ತಿಯ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಚರ್ಚಿಸಲಾಗಿದ್ದು, ಅಕ್ರಮವಾಗಿ ಮಣ್ಣು ತೆಗೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.
ರಘುರಾಮ, ಅಧೀಕ್ಷಕ ಅಭಿಯಂತರ, ಕಾವೇರಿ ನೀರಾವರಿ ನಿಗಮ, ಮಂಡ್ಯ ವೃತ್ತ.

ನಮ್ಮ ಸ್ವಾರ್ಥಕ್ಕಾಗಿ ನಮಗೆ ಕುಡಿಯುಲು ಮತ್ತು ಬೆಳೆಗಳಿಗೆ ನೀರು ಕೊಡುವ ಕಾವೇರಿ ಒಡಲಿನ ಮಣ್ಣಿಗೆ ಕನ್ನ ಹಾಕುವುದು ಎಷ್ಟು ಸರಿ? ಇದರಿಂದ ಪರಿಸರಕ್ಕೆ ಅಪಾಯ ಉಂಟಾಗುವ ಹೆಚ್ಚಾಗುವ ಸಾಧ್ಯತೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿಯ ಫಲದಿಂದ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಅವರ ಪರಿಶ್ರಮದಿಂದ ನಿರ್ಮಿತವಾಗಿರುವ ಅಣೆಕಟ್ಟೆ ಉಳಿಸಲು ಸರ್ಕಾರ ಕ್ರಮವಹಿಸಬೇಕು. ಹಿನ್ನೀರಿನಲ್ಲಿ ಮಣ್ಣು ತೆಗೆಯುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಹಿನ್ನೀರಿನ ಸಂಪತ್ತು ಉಳಿಯಲು ಸಾಧ್ಯ.
ಮಜ್ಜಿಗೆಪುರ ಶಿವರಾಂ, ಸಾಹಿತಿ , ಮಜ್ಜಿಗೆಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net