

ಅರಟಾಳ: ಗ್ರಾಮೀಣ ಸೊಗಡಿಗೆ ಸಾಕ್ಷಿಯಾಗಿರುವ ಅರಟಾಳ ಮಾಳಿಂಗೇಶ್ವರ ಜಾತ್ರೆ ಎಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ಪೈಲ್ವಾನರ ಕಾಳಗ, ಜಟ್ಟಿಗರು ಎತ್ತುವ ಚಂದ್ರಮ ಕಲ್ಲು, ಚೀಲ ಎತ್ತುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮೊಸರು ಗಡಿಗೆ ಒಡೆಯುವ ಸ್ಪರ್ಧೆ ರೋಮಾಂಚನಕಾರಿದೆ. ಜಾತ್ರೆಗೆ ಬಂದ ಭಕ್ತರಿಗೆ ನಿತ್ಯ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿದೆ.
ಕರ್ನಾಟಕ-ಮಹಾರಾಷ್ಟ್ರದ ಸುಪ್ರಸಿದ್ಧ ಡೊಳ್ಳಿನ ಪದ, ಭಜನೆ ಕೇಳಲು ದೂರದ ಊರುಗಳಿಂದ ಭಕ್ತರು ಆಗಮಿಸುತ್ತಾರೆ. ಈ ಜಾತ್ರೆಯನ್ನು ಭಂಡಾರದ ಜಾತ್ರೆ, ಬಂಗಾರದ ಜಾತ್ರೆಯಂತಲೂ ಕರೆಯುತ್ತಾರೆ. ಅವರಾತ್ರಿ ಅಮವಾಸ್ಯೆಯಂದು ನಡೆಯುವ ಜಾತ್ರೆಯಲ್ಲಿ ಎದುರುಗೊಳ್ಳುವ ಪಲ್ಲಕ್ಕಿಗಳ ದೃಶ್ಯ ಎಂತವರನ್ನು ಮಂತ್ರ ಮುಗ್ದರಾಗಿಸುತ್ತದೆ. ಭಕ್ತರು ಚಾಂಗಬಲೇ ಘೋಷನೆ ಕೂಗುತ್ತಾರೆ. ಭಂಡಾರ
ಎರಚಿ ಹರಕೆ ತೀರಿಸುವ ದೃಶ್ಯ ನೋಡುಗರ ಮನ ತನಿಸುತ್ತದೆ. ಪಲ್ಲಕ್ಕಿ ಉತ್ಸವದಲ್ಲಿ ಪಟ್ಟದ ಪೂಜಾರಿಗಳಿಂದ ನುಡಿನ ಹೇಳುವುದು ಅಲಗ ಹಾಯುವುದು ವಿಶೇಷ.
ಅರಟಾಳಕ್ಕೆ ಶ್ರೀ ಮಾಳಿಂಗೇಶ್ವರ ದೇವರು ಹಾರೈಸಿದ ಫಲವಾಗಿ ಇಂದು ಗ್ರಾಮವು ಭಕ್ತಿಯ ತಾಣವಾಗಿದೆ. ಸದಾ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ವರ್ಷಕ್ಕೊಮ್ಮೆ ಜರುಗುವ ಈ ಜಾತ್ರೆಗೆ ಗ್ರಾಮದ ಹೆಣ್ಣುಮಕ್ಕಳು ಸೇರಿದಂತೆ ಎಲ್ಲರೂ ತಪ್ಪದೇ ಪಾಲ್ಗೊಳ್ಳುತ್ತಾರೆ. ಜಾತ್ರೆಯಲ್ಲಿ ಭಕ್ತರು ತನು, ಮನ, ಧನದಿಂದ ಸೇವೆ ಸಲ್ಲಿಸುವುದು ವಿಶೇಷ.
ಜಾತ್ರೆ ನಿಮಿತ್ತ ಗ್ರಾಮ ಲೈಟಿಂಗ್ ವ್ಯವಸ್ಥೆಯಿಂದ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಭಕ್ತರು ಭಕ್ತಿಯಿಂದ ಪಾಲ್ಗೊಂಡು ಜಾತ್ರೆ ಯಶಸ್ಸಿಗೆ ಕೈ ಜೋಡಿಸಿದ್ದಾರೆ. ಜಾತ್ರಾ ಮಹೋತ್ಸವ ಕಮಿಟಿ ಅಚ್ಚುಕಟ್ಟಾಗಿ ಜಾತ್ರೆ ನಡೆಸಿ ಮಾಳಿಂಗೇಶ್ವರರ ಕೃಪೆಗೆ ಪಾತ್ರವಾಗಿದೆ.