

ಮಂಗಳೂರು: ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ವರ್ಷಾವಧಿ ಉತ್ಸವ ಸೋಮವಾರ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು.
ಬ್ರಹ್ಮ ಬೈದರ್ಕಳರ ದರ್ಶನ ಸೇವೆಯಾಗಿ ಐದು ದಿನಗಳ ಜಾತ್ರೆಗೆ ಚಾಲನೆ ನೀಡಲಾಯಿತು. ಡಿ.29ರವರೆಗೆ ಉತ್ಸವ ನಡೆಯಲಿದೆ. ಧ್ವಜಾರೋಹಣ ಸಂದರ್ಭ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್, ಕ್ಷೇತ್ರದ ಮ್ಯಾನೇಜರ್ ಜೆ.ಕಿಶೋರ್ ಕುಮಾರ್, ಮೊಕ್ತೇಸರರಾದ ಬಿ.ವಿಠಲ, ವಾಮನ ಅಳಪೆ, ದಾಮೋದರ ನಿಸರ್ಗ, ಜಗದೀಪ್ ಡಿ.ಸುವರ್ಣ, ದಿವರಾಜ್, ಜೆ.ದಿನೇಶ್ ಅಂಚನ್, ಜೆ.ವಿಜಯ, ಕಾರ್ಪೊರೇಟರ್ ಸಂದೀಪ್ ಗರೋಡಿ, ಬೆಂಗಳೂರು ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ವೇದಕುಮಾರ್, ಉದ್ಯಮಿ ಜಿತೇಂದ್ರ ವೈ.ಸುವರ್ಣ, ಶೈಲೇಂದ್ರ ಸುವರ್ಣ, ಗುರು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಜಯಾನಂದ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ.ಪಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇಂದು ರಾತ್ರಿ 7ಕ್ಕೆ ಗಣಪತಿ ದೇವರ ಮತ್ತು ಬ್ರಹ್ಮರ ಜೋಡು ಮಹಾಬಲಿ ಆಗಿ ಶ್ರೀ ಬಾಲಪರಮೇಶ್ವರಿ ದೇವಿಯ ಸಾನ್ನಿಧ್ಯದಲ್ಲಿ ಗಣಪತಿ ಮತ್ತು ಬ್ರಹ್ಮರಿಗೆ ಪೂಜೆ, 8.30ಕ್ಕೆ ಪಾಲಕಿ ಬಲಿ, 10ಕ್ಕೆ ಬೈದರ್ಕಳ ದರ್ಶನ, 11ಕ್ಕೆ ಶ್ರೀ ವಿಷ್ಣುಮೂರ್ತಿ ಉತ್ಸವ, ಡಿ.27ರಂದು ರಾತ್ರಿ ಗಂಟೆ 11ಕ್ಕೆ ಶ್ರೀ ಕೊಡಮಣಿತ್ತಾಯ ಗಗ್ಗರ ಸೇವೆ, 1.30ಕ್ಕೆ ಗಣಪತಿ ದೇವರ ಮತ್ತು ಬ್ರಹ್ಮರ ಪಾಲಕಿ ಬಲಿ, 2.30ಕ್ಕೆ ಬೈದರ್ಕಳ ದರ್ಶನ ಮತ್ತು ಕೊಡಮಣಿತ್ತಾಯ ನೇಮ ನಡೆಯಲಿದೆ. ಡಿ.29ರಂದು ರಾತ್ರಿ 7.30ರಿಂದ 9ರವರೆಗೆ ಮಾಯಂದಾಲ್ ದೇವಿಯ ಉತ್ಸವ, 11ಕ್ಕೆ ಮಹಾಪೂಜೆ, ನೈವೇದ್ಯ ಸಮರ್ಪಣೆ, ರಾತ್ರಿ 11.35ಕ್ಕೆ ಬೈದರ್ಕಳ ದರ್ಶನ ಆಗಿ ಧ್ವಜಾವರೋಹಣ ನಡೆಯಲಿದೆ ಎಂದು ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈದರ್ಕಳ ನೇಮೋತ್ಸವ
ಡಿ.28ರಂದು ರಾತ್ರಿ 8ಕ್ಕೆ ಬೈದರ್ಕಳರು ಒಲಿಮರೆಯಿಂದ ಹೊರಡುವುದು, 10ಕ್ಕೆ ಬಾಲಪರಮೇಶ್ವರಿ ದೇವಿ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಪಾಲಕಿ ಬಲಿ, 11ಕ್ಕೆ ಶ್ರೀ ದೇಯಿ ಬೈದೆತಿ ನೇಮೋತ್ಸವ, ಕೋಟಿ ಚೆನ್ನಯ ಹಾಗೂ ದೇಯಿ ಬೈದೆತಿ ಭೇಟಿ, 2.30ಕ್ಕೆ ಗಣಪತಿ ದೇವರ ಮತ್ತು ಬ್ರಹ್ಮರ ಪಾಲಕಿ ಬಲಿ, 4ಕ್ಕೆ ಬೈದರ್ಕಳ ದರ್ಶನ ಆಗಿ ಸುರಿಯ ಹಾಕಲಿಕ್ಕೆ ಮತ್ತು ಅವಧೂತ ಕಟ್ಟೆಯಲ್ಲಿ ಮಹಾತ್ಮರಿಗೆ ಪೂಜೆ, ನಂತರ ಬೈದರ್ಕಳ ಜಾತ್ರೆ ನಡೆಯಲಿದೆ.