ಹೃದಯ ಶ್ರೀಮಂತ ಸಂಸ್ಥೆ ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಕಂಕನಾಡಿ ಶಾಖೆ ಉದ್ಘಾಟಿಸಿ ಮೇಯರ್ ಅಭಿಮತ

mng-may26-shresha2
Published on

ಮಂಗಳೂರು: ಸಮಾಜದ ದುರ್ಬಲ ವರ್ಗದವರ ಶ್ರೇಯೋಭಿವೃದ್ಧಿಗೆ ಸ್ಥಾಪನೆಗೊಂಡ ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಹೃದಯ ಶ್ರೀಮಂತಿಕೆ ಹೊಂದಿರುವ ಸಂಸ್ಥೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಬಣ್ಣಿಸಿದರು.


ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ 5ನೇ ಶಾಖೆಯನ್ನು ಭಾನುವಾರ ಕಂಕನಾಡಿ ಫಾದರ್ ಮುಲ್ಲರ್ ವೃತ್ತದ ಬಳಿ ಡಾ.ಎಲ್.ಪಿ.ಫರ್ನಾಂಡಿಸ್ ಕಟ್ಟಡದ ಮೊದಲ ಮಹಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.


ಸೊಸೈಟಿ ಲಾಭದ ಒಂದಂಶವನ್ನು ನಿವೃತ್ತ ಸೈನಿಕರಿಗಾಗಿ ಮೀಸಲಿಟ್ಟಿರುವುದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಹಾಯ ಮಾಡುವ, ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಸಮಾಜಮುಖಿ ಕೆಲಸಗಳು ಶ್ಲಾಘನೀಯ. ಈ ಸೊಸೈಟಿ ಸಹಕಾರ ತತ್ವವನ್ನು ನಿಜವಾದ ಅರ್ಥದಲ್ಲಿ ಪಾಲಿಸುತ್ತಿದ್ದು, ಇತರ ಸಂಸ್ಥೆಗಳಿಗೆ ಹಾಗೂ ದೇಶಕ್ಕೆ ಮಾದರಿಯಾಗಿದೆ ಎಂದರು.


ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕ ರೆ.ಫಾ.ರಿಚರ್ಡ್ ಅಲೋಶಿಯಸ್ ಕೊಯೆಲ್ಲೋ ಮುಖ್ಯ ಅತಿಥಿಯಾಗಿದ್ದರು. ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿಸ್ವಾರ್ಥ ಸೇವೆ ಮುಂದುವರಿಸಿ, ಬಡವರ ಕಣ್ಣೊರೆಸುವ ಕೆಲಸ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.


ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ನಿರ್ದೇಶಕ ಎಸ್.ಕೆ.ಮಂಜುನಾಥ್ ಮಾತನಾಡಿ, ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಆರಂಭಗೊಂಡು ಐದು ವರ್ಷಗಳಲ್ಲಿ ಐದು ಶಾಖೆಗಳನ್ನು ಆರಂಭಿಸಿ, ಸಮಾಜಮುಖಿ ಸೇವೆಯೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಶ್ರೀಶಾ ಬಡವರ ಬದುಕಿನಲ್ಲಿ ಹರ್ಷ ಉಂಟು ಮಾಡುವಲ್ಲಿ ಇಟ್ಟಿರುವ ಹೆಜ್ಜೆ ಎಲ್ಲರಿಗೂ ಪ್ರೇರಣೆ ಎಂದರು.


ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ಇನ್ನೋರ್ವ ನಿರ್ದೇಶಕಿ ಭಾರತಿ ಭಟ್ ಮಾತನಾಡಿ, ಶ್ರೀಶಾ ಸೊಸೈಟಿಯ ಐದು ವರ್ಷದ ಸಾಧನೆ ಅಮೋಘ. ಎಂ.ಎಸ್.ಗುರುರಾಜ ಅವರ ಸಮರ್ಥ ನಾಯಕತ್ವದಲ್ಲಿ ವರ್ಷದಿಂದ ವರ್ಷಕ್ಕೆ ಲಾಭಾಂಶದಲ್ಲಿ ಏರಿಕೆಯಾಗುತ್ತಿರುವುದು ಸಾಧನೆ. ಲಾಭಾಂಶ ಸಮಾಜಕ್ಕೆ ಅರ್ಪಸಿ ಸಾರ್ಥಕ್ಯ ಪಡೆಯುತ್ತಿರುವುದು ಉತ್ತಮ ವಿಚಾರ ಎಂದರು.


ನಿವೃತ್ತ ಸೈನಿಕ ಪ್ರಭಾಕರ ಅನಿಸಿಕೆ ವ್ಯಕ್ತಪಡಿಸಿ, ಸೊಸೈಟಿ ಮತ್ತು ಸಮಾಜದ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿ, ಬಡ ವರ್ಗದವರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಲಿ ಎಂದರು.


ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್. ಶುಭ ಹಾರೈಸಿದರು.
ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಸನ್ನ ಕುಮಾರ್ ವಂದಿಸಿದರು. ಶಾಖಾ ಪ್ರಬಂಧಕಿ ಚೈತ್ರ ಕಾರ್ಯಕ್ರಮ ನಿರೂಪಿಸಿದರು.

ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸ್ಥಾಪನೆಗೊಂಡು ಐದು ವರ್ಷಗಳಲ್ಲಿ ಐದು ಶಾಖೆ ಆರಂಭಿಸಬೇಕೆನ್ನುವ ಕನಸು ನನಸಾಗಿದೆ. ಸಾಲ ಶೇ.99.2ರಷ್ಟು ವಸೂಲಾತಿಯಾಗುತ್ತಿದೆ. ಸೊಸೈಟಿಯ ಲಾಭಾಂಶ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಮೂಲ ಉದ್ದೇಶದಂತೆ ಲಾಭದ ದೊಡ್ಡ ಮೊತ್ತ ಸಮಾಜಕ್ಕೆ ಸಲ್ಲಿಕೆಯಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಇದುವರೆಗೆ 20 ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ.
ಎಂ.ಎಸ್.ಗುರುರಾಜ್
ಅಧ್ಯಕ್ಷರು, ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net