ಟಿಪ್ಪರ್ ಚಲಿಸಿ ಸವಾರ ಸ್ಥಳದಲ್ಲೇ ಮೃತ್ಯು ಸಹ ಸವಾರರಿಬ್ಬರಿಗೆ ಗಂಭೀರ ಗಾಯ

accident-15
Published on

ಮಂಗಳೂರು: ನಗರದ ಕಂಕನಾಡಿ ನಾಗುರಿ ಬಳಿ ಸ್ಕೂಟರೊಂದು ಸ್ಕಿಡ್ ಆಗಿ ರಸ್ತೆಗೆ ಬಿದ್ದಾಗ ಟಿಪ್ಪರೊಂದು ಸವಾರನ ಮೇಲೆ ಹರಿದು ಹೋದ ಪರಿಣಾಮ ಸವಾರ ಮೃತಪಟ್ಟರೆ, ಸಹಸವಾರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ.


ಎಕ್ಕೂರು ನಿವಾಸಿ ಹರ್ಷನ್ (17) ಮೃತಪಟ್ಟವರು. ಕೀರ್ತನ್ (17) ಮತ್ತು ಕಿಶೋರ್ (18) ಗಾಯಗೊಂಡವರು. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಗುರುವಾರ ಸಂಜೆ ವೇಳೆ ಪಡೀಲ್ ಕಡೆಯಿಂದ ಪಂಪ್‌ವೆಲ್ ಕಡೆಗೆ ಚಲಿಸುತ್ತಿದ್ದ ಸ್ಕೂಟರ್ ನಾಗುರಿ ಅಳಪೆ ಮಧ್ಯೆ ಸ್ಕಿಡ್ ಆಗಿ ಹೆದ್ದಾರಿಗೆ ಮಗುಚಿ ಬಿತ್ತು. ಇದರಿಂದ ಸ್ಕೂಟರ್‌ನಲ್ಲಿದ್ದ ಮೂವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಇದೇ ಸಂದರ್ಭ ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಹರ್ಷನ್ ಮೇಲೆಯೇ ಹರಿದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಳಿದಿಬ್ಬರು ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಗರದ ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಚ್ಚುತ್ತಿದೆ ನಿರ್ಲಕ್ಷ್ಯದ ಚಾಲನೆ: ನಗರದಲ್ಲಿ ಅಪ್ರಾಪ್ತರ ವಾಹನ ಚಾಲನೆ, ಹೆಲ್ಮೆಟ್ ಹಾಕದೆ ಚಲಿಸುವುದು, ತ್ರಿಬಲ್ ರೈಡ್ ಹೋಗುವುದು, ವೇಗದ ಚಾಲನೆ ಸೇರಿದಂತೆ ಮೋಟಾರು ಕಾಯಿದೆ ಉಲ್ಲಂಸಿ ವಾಹನ ಸವಾರ ಮಾಡುತ್ತಿರುವ ದೃಶ್ಯಗಳು ನಗರದಲ್ಲಿ ಕಂಡು ಬರುತ್ತಿದೆ. ಈ ಬಗ್ಗೆ ಗುರುವಾರ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿದೆ. ಸಂಚಾರ ಪೊಲೀಸರು ಗಂಭೀರವಾಗಿ ಪರಿಗಣಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಅಮಾಯಕರು ರಸ್ತೆಯಲ್ಲಿ ಜೀವ ಕಳೆದುಕೊಳ್ಳುವ ಪ್ರಕರಣ ಇನ್ನಷ್ಟು ಹೆಚ್ಚಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net