

ಮೈಸೂರು: ದಸರಾ ಅಂಗವಾಗಿ ಅರಮನೆಯಲ್ಲಿ ರಾಜವಂಶಸ್ಥರಿಂದ ನಡೆಯುವ ನವರಾತ್ರಿಯ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಪಟ್ಟದ ಆನೆಯಾಗಿ ಕಂಜನ್ ಹಾಗೂ ಪಟ್ಟದ ನಿಶಾನೆ ಆನೆಯಾಗಿ ಭೀಮ ಆಯ್ಕೆಯಾಗಿವೆ.
ಅ.3ರಿಂದ 12ರವರೆಗೆ ಅರಮನೆಯಲ್ಲಿ ನವರಾತ್ರಿ ಆಚರಣೆ ನಡೆಯಲಿದೆ. ಸಂಸದ, ರಾಜವಂಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದರ್ಬಾರ್ ಹಾಲ್‌ನಲ್ಲಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ರಾಜವಂಶಸ್ಥರು ನಡೆಸುವ ಧಾರ್ಮಿಕ ಕಾರ್ಯದಲ್ಲಿ ಪಟ್ಟದ ಆನೆ, ಪಟ್ಟದ ಹಸು, ಒಂಟೆ, ಕಳಸ ಹೊತ್ತ ಮುತೈದೆಯರೊಂದಿಗೆ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದಿಂದ ಅರಮನೆಯ ಕನ್ನಡಿ ತೊಟ್ಟಿವರೆಗೂ ದೇವರನ್ನು ತೆಗೆದುಕೊಂಡು ಹೋಗುವ ಪದ್ಧತಿ ಇದೆ.
ಈ ಹಿನ್ನೆಲೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಭಾನುವಾರ ಪಟ್ಟದ ಆನೆ ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಿದರು. ರಾಜವಂಶಸ್ಥರ ಕೋರಿಕೆ ಮೇರೆಗೆ ದಸರಾ ಗಜಪಡೆಯ ಗಂಡಾನೆಗಳಾದ ಭೀಮ, ಕಂಜನ್, ಸುಗ್ರೀವ, ಗೋಪಿ, ಏಕಲವ್ಯ, ಹೆಣ್ಣಾನೆಗಳಾದ ಲಕ್ಷ್ಮೀ ಮತ್ತು ಹಿರಣ್ಯ ಆನೆಗಳನ್ನು ಅರಮನೆಯ ಕನ್ನಡಿ ತೊಟ್ಟಿ ಬಳಿ ಕರೆದೊಯ್ಯಲಾಗಿತ್ತು.
ಪರಿಶೀಲನೆ ಬಳಿಕ ಪಟ್ಟದ ಆನೆ, ಪಟ್ಟದ ನಿಶಾನೆ ಆನೆ ಆಯ್ಕೆ ಮಾಡಲಾಯಿತು.
‘ಪಟ್ಟದ ಆನೆಯಾಗಿ ಕಂಜನ್ ಹಾಗೂ ಪಟ್ಟದ ನಿಶಾನೆ ಆನೆಯಾಗಿ ಭೀಮಾ ಆನೆಯನ್ನು ಆಯ್ಕೆ ಮಾಡಲಾಗಿದೆ. ದಸರಾ ಗಜಪಡೆಯ ಎಲ್ಲ ಆನೆಗಳು ಉತ್ತಮವಾಗಿದ್ದು, ಜಂಬೂಸವಾರಿಗೆ ಸಜ್ಜುಗೊಳಿಸಲಾಗುತ್ತಿದೆ’ ಎಂದು ಡಿಸಿಎಫ್(ವನ್ಯಜೀವಿ) ಡಾ.ಐ.ಬಿ.ಪ್ರಭುಗೌಡ ತಿಳಿಸಿದರು.
ಶ್ರೀರಂಗಪಟ್ಟಣ ದಸರಾ ಆನೆ, ದಸರಾ ನಿಶಾನೆ ಆನೆ ಆಯ್ಕೆ ಮಾಡಬೇಕಿದೆ. ಈಗಾಗಲೇ ಎಲ್ಲ ಆನೆಗಳು ಉತ್ತಮವಾಗಿ ತಾಲೀಮು ನಡೆಸಿವೆ. ಅಭ್ಯಾಸ ಪೂರ್ಣಗೊಂಡ ಬಳಿಕ ಆನೆಗಳಿಗೆ ಜವಾಬ್ದಾರಿ ನೀಡಲಾಗುವುದು. ಇನ್ನೆರಡು ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿವೆ ಎಂದು ತಿಳಿಸಿದರು