

ದುಬಾರೆ ಶಿಬಿರದ ಹೊಸ ಆನೆ ಕಂಜನ್ ಮೇಲೆ ಈಗ ಎಲ್ಲರ ಗಮನ ಕೇಂದ್ರೀಕರಿಸಿದೆ. ಆತನ ಆಕರ್ಷಕ, ಬಲಿಷ್ಠ ದೇಹ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಈತ ಭವಿಷ್ಯದಲ್ಲಿ ಗಜಪಡೆಯ ನಾಯಕನಾಗುವ ಮುನ್ಸೂಚನೆ ಇದೆ.
ಮೊದಲ ತಂಡದಲ್ಲಿ 24 ವರ್ಷದ ಕಂಜನ್ ಅತ್ಯಂತ ಕಿರಿಯ ಆನೆ ಆಗಿದೆ. ಮೊದಲ ಬಾರಿಗೆ ನಾಡಹಬ್ಬದ ದಸರೆಯಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದಾನೆ. 3700 ಕೆಜಿ ತೂಗುತ್ತಾನೆ. 2.62 ಮೀಟರ್ ಎತ್ತರ ಹಾಗೂ 3.30 ಮೀಟರ್ ಉದ್ದ ಇದ್ದಾನೆ. ದಂತ, ದೇಹ ರಚನೆ, ಸಮತಟ್ಟಾಗಿರುವ ಬೆನ್ನು ಅಂಬಾರಿ ಇಡಲು ಸೂಕ್ತವಾಗಿದೆ ಎನ್ನಲಾಗಿದೆ.
ಬಂಡೀಪುರದ ಪಾರ್ಥಸಾರಥಿ ಆನೆಯನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಈ ಆನೆಗೆ ಮದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಅವಕಾಶ ಕಳೆದುಕೊಂಡನು. ಪರಿಣಾಮ ಹೊಸ ಆನೆ ಕಂಜನ್ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆದುಕೊಂಡನು.
2014ರಲ್ಲಿ ಹಾಸನ ಜಿಲ್ಲೆಯ ಆಲೂರಿನಲ್ಲಿ ನಡೆದ ಆನೆ ಸೆರೆ ಕಾರ್ಯಾಚರಣೆಯಲ್ಲಿ ಕಂಜನ್ ಆನೆಯನ್ನು ಸೆರೆ ಹಿಡಿಯಲಾಯಿತು. ಪುಂಡಾಟಿಕೆ ಮಾಡುತ್ತಿದ್ದ ಕಾರಣ ದುಬಾರೆ ಆನೆ ಶಿಬಿರಕ್ಕೆ ತಂದು ಪಳಗಿಸಲಾಯಿತು. ಸೆರೆ ಸಿಕ್ಕ ಎರಡು, ಮೂರು ತಿಂಗಳಿನಲ್ಲೇ ಕಂಜನ್ ಶಿಬಿರದ ನೆಚ್ಚಿನ ಆನೆಯಾದ. ಇವನದು ಶಾಂತ ಸ್ವಭಾವ, ಧೈರ್ಯಶಾಲಿ. ಹುಲಿ, ಆನೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇದೆ. ಕೊಡಗಿನಲ್ಲಿ ನಡೆದ ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲೂ ಭಾಗವಹಿಸಿತ್ತು. ಮಂಗಳೂರಿನ ಕಡಬಾದಲ್ಲಿ ನಡೆದ ಆನೆ ಸೆರೆ ಕಾರ್ಯಾಚರಣೆಯಲ್ಲೂ ಭಾಗವಹಿಸಿದ್ದಾನೆ.
ಕಂಜನ್ ಆನೆಯನ್ನು ಮೊದಲು ಮಾವುತ ಗೋಪಾಲ ಆರೈಕೆ ಮಾಡುತ್ತಿದ್ದರು. ಆದರೆ, ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಇದೀಗ ಮಾವುತರಾಗಿ ವಿಜಯ್, ಕಾವಾಡಿಯಾಗಿ ಮಣಿಕಂಠ ಕಂಜನ್ ಪೋಷಣೆ ಮಾಡುತ್ತಿದ್ದಾರೆ.
‘ಬಂಡೀಪುರದ ರಾಂಪುರ ಕ್ಯಾಂಪ್‌ನ ಪಾರ್ಥಸಾರಥಿ ಆನೆಯನ್ನು ಮೊದಲ ತಂಡದಲ್ಲಿ ಕರೆತರಲು ಉದ್ದೇಶಿಸಲಾಗಿತ್ತು. ಆದರೆ, ಮದವೇರಿದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಕಂಜನ್ ಆನೆಯನ್ನು ಕರೆತರಲಾಗಿದೆ. ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದ್ದಾನೆ. ಹೊಸ ಆನೆಯಾದರೂ ಇತರ ಆನೆಗಳಂತೆಯೇ ನಾಡಿನ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಾನೆ’ ಎಂದು ಡಿಸಿಎಫ್ ಸೌರಭ್‌ಕುಮಾರ್ ‘ವಿಜಯವಾಣಿ’ ಗೆ ತಿಳಿಸಿದರು.