

ಕುಶಾಲನಗರ:
ಕುಶಾಲನಗರ ತಾಲೂಕು ಕಣಿವೆ ಗ್ರಾಮದಲ್ಲಿ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಏ.6ರಂದು ನಡೆಯಲಿದೆ. ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಣಿವೆ ಕಾವೇರಿ ನದಿ ತೀರದ ದಂಡೆಯಲ್ಲಿದ್ದು, ಅಂದು ನಡೆಯುವ ವಾರ್ಷಿಕ ಜಾತ್ರೆಗೆ ಕೊಡಗು ಮಾತ್ರವಲ್ಲದೆ ಪಕ್ಕದ ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಕಾಶಿಯಿಂದ ಅಂಚೆ ಮೂಲಕ ಬರುವ ಗಂಗಾಜಲದ ಅಭಿಷೇಕ ಇಲ್ಲಿಯ ವಿಶೇಷವಾಗಿದೆ.
ಮಧ್ಯಾಹ್ನ 1.30.ರಿಂದ 2.18ರ ಶುಭ ಅಭಿಜಿನ್ ಮುಹೂರ್ತದಲ್ಲಿ ವೇದ ಬ್ರಹ್ಮ ನರಹರಿಶರ್ಮಾ ನೇತ್ರತ್ವದಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ರಥೋತ್ಸವದ ಅಂಗವಾಗಿ ಏ. 4. ರಿಂದಲೇ ದೇವಾನಾಂದಿ, ಅಂಕುರಾರ್ಪಣ, ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಸ್ಧಾಪನೆ, 5. ರಂದು ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಗಣಪತಿ ಹೋಮ, ಸಂಜೆ ಕೂಡಿಗೆ, ಮತ್ತು ಶಿರಂಗಾಲ ಗ್ರಾಮಸ್ಥರಿಂದ ಸಂಧ್ಯಾಪೂಜೆ, ಮತ್ತು ಸಂಜೆ 7. ಗಂಟೆಗೆ ಸೀತಾ ಕಲ್ಯಾಣೋತ್ಸವ ಮಹಾಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ದೇವಾಲಯದ ಆವರಣದಲ್ಲಿ ನಡೆಯಲ್ಲಿದೆ.
ಐತಿಹಾಸಿಕ ಮಹತ್ವದ ಶ್ರೀ ರಾಮಲಿಂಗೇಶ್ವರ ದೇವಾಲಯಕ್ಕೆ ರಾಮಾಯಣ ಕಾಲದ ಪೌರಾಣಿಕ ನಂಟು ಕೂಡ ಇದೆ. ತ್ರೇತಾಯುಗದಲ್ಲಿ ಭಗವಾನ್ ಶ್ರೀ ರಾಮನು ಸೀತಾದೇವಿಯನ್ನು ಹುಡುಕುತ್ತಾ ಲಕ್ಷ್ಮಣನ ಜತೆಯಲ್ಲಿ ಇಲ್ಲಿಗೆ ಬಂದಿದ್ದ ಎನ್ನುವಂಥ ಮಾತುಗಳು ಕೇಳಿ ಬರುತ್ತವೆ. ರಾತ್ರಿಯಾದ ಹಿನ್ನೆಲೆಯಲ್ಲಿ ಶ್ರೀರಾಮನು ಕಾವೇರಿ ದಡದಲ್ಲಿಯೇ ರಾತ್ರಿ ಕಳೆಯುತ್ತಾನೆ. ಬೆಳಗ್ಗೆ ಎದ್ದು, ಶ್ರೀರಾಮನು ಕಾವೇರಿ ನದಿಯ ದಡದಲ್ಲಿ ಮರಳಿನಿಂದ ಲಿಂಗವನ್ನು ಮಾಡಿ ಶಿವನನ್ನು ಆರಾಧಿಸಿದ ಸ್ಥಳ ಶ್ರೀರಾಮಲಿಂಗೇಶ್ವರ ಕ್ಷೇತ್ರ ಆಗಿದೆ ಎನ್ನುತ್ತದೆ ಸ್ಥಳ ಪುರಾಣ.
ಈ ದೇವಾಲಯ ಹೊಂದಿಕೊAಡAತೆ ಲಕ್ಷ್ಮಣಗುಡ್ಡ, ಹರಿಹರೇಶ್ವರ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಗುಹೇಶ್ವರ ದೇವಸ್ಥಾನಗಳು ಇವೆ. ಈ ಜಾತ್ರೆಯ ಉತ್ಸವ ಕಾರ್ಯಕ್ರಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವಾಲಯದ ಜಾತ್ರೆಯಲ್ಲಿ ಸುತ್ತಮುತ್ತಲಿನ ಸುಮಾರು 25ರಿಂದ 30 ಹಳ್ಳಿಯ ಜನರು ಭಾಗವಹಿಸುತ್ತಾರೆ.