ಜಿಲ್ಲೆಯಾದ್ಯಂತ ಕಣಿ ಪೂಜೆಯ ಸಂಭ್ರಮ

kani pooje
Published on

ಮಡಿಕೇರಿ

ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಶುಕ್ರವಾರ (ಅ.17) ಪವಿತ್ರ ತೀರ್ಥೋದ್ಭವ ಸಂಭವಿಸಿದ ನಂತರ ಶನಿವಾರ ಜಿಲ್ಲೆಯಾದ್ಯಂತ ಕಣಿ ಪೂಜೆ ನಡೆಯಿತು. ಅಲ್ಲಲ್ಲಿ ಗದ್ದೆಗಳಲ್ಲಿ ಬೆತ್ತು ಕಟ್ಟುವ ಆಚರಣೆಯೂ ನಡೆಯಿತು. ಮುಂದಿನ ಒಂದು ತಿಂಗಳ ಕಾಲ ಭಾಗಮಂಡಲದಲ್ಲಿ ಜಾತ್ರೆಯ ಸಂಭ್ರಮ ಇರಲಿದ್ದು, ಕಿರು ಸಂಕ್ರಮಣ ತನಕವೂ ಭಕ್ತರ ಹರಿವು ಶ್ರೀ ಕ್ಷೇತ್ರದಲ್ಲಿ ಕಾಣಬಹುದಾಗಿದೆ.

ಕೊಡಗಿನವರ ಪ್ರಮುಖ ಹಬ್ಬಗಳಲ್ಲಿ ಕಾವೇರಿ ತುಲಾ ಸಂಕ್ರಮಣಕ್ಕೆ ವಿಶೇಷ ಸ್ಥಾನವಿದೆ. ತಲಕಾವೇರಿಯಲ್ಲಿ ತೀರ್ಥೋದ್ಭವದ ನಂತರ ಮನೆಮನೆಗಳಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯುತ್ತದೆ. ಇದರ ಒಂದು ಭಾಗವಾಗಿ ಜಿಲ್ಲೆಯಾದ್ಯಂತ ಶನಿವಾರ ಕೊಡಗಿನ ಮನೆಗಳಲ್ಲಿ ಕಾವೇರಿ ತಾಯಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸುವ ಸಂಭ್ರಮದ ಕಣಿಪೂಜೆ ಆಚರಿಸಲಾಯಿತು.

ಕೊಡಗಿನಲ್ಲಿರುವ ಕೊಡವರು, ಕೊಡವ ಭಾಷಿಕ ಜನಾಂಗದವರು ಹಾಗೂ ಅರೆಭಾಷಿಕ ಗೌಡ ಜನಾಂಗದವರು ತಲಕಾವೇರಿಯಲ್ಲಿ ಪವಿತ್ರ ತೀಥೋದ್ಭವ ಸಂಭವಿಸಿದ ಮಾರನೆಯ ದಿನ ಕೊಡಗಿನ ಕುಲದೇವಿ ಕಾವೇರಿ ತಾಯಿಯ ಸಾಂಕೇತಿಕ ಮೂರ್ತಿ ಅಥವಾ ಫೋಟೋಗಳಿಗೆ ತಮ್ಮ ತಮ್ಮ ಮನೆಗಳಲ್ಲಿ ಶಾಸ್ತೋಕ್ತವಾಗಿ ಪೂಜೆ ಸಲ್ಲಿಸುವುದನ್ನು ಕಣಿ ಪೂಜೆ ಎಂದು ಕರೆಯಲಾಗುತ್ತದೆ. ಎಲ್ಲರಿಗೂ ವ್ಯಯಕ್ತಿಕವಾಗಿ ತಲಕಾವೇರಿಗೆ ತೆರಳಿ ಮಾತೆ ಕಾವೇರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗುವುದಿಲ್ಲ.

ಹಾಗಾಗಿ ಮನೆಮನೆಗಳಲ್ಲಿ ಕಾವೇರಿ ತಾಯಿಯ ವಿಗ್ರಹ ಸಾಂಕೇತಿಯ ಮೂರ್ತಿ ಇಟ್ಟು ಕಾವೇರಿ ತಾಯಿಯನ್ನು ಸ್ತುತಿಸಿ ಆಕೆಯನ್ನು ಮನೆಗೆ ಕಣಿ ಪೂಜೆ ಮೂಲಕ ಸಂಭ್ರಮದಿAದ ಸ್ವಾಗತಿಸಲಾಗುತ್ತದೆ. ಕಣಿ ಎಂದರೆ ವಿಗ್ರಹ ಎನ್ನುವ ಅರ್ಥ ಇದೆ.

ಕಣಿಪೂಜೆಯಲ್ಲಿ ಮನೆಯ ಮುತ್ತೆöÊದೆಯ ಪಾತ್ರ ದೊಡ್ಡದಿರುತ್ತದೆ. ನಸುಕಿನಲ್ಲಿ ಬೇಗನೆ ಏಳುವ ಆಕೆ ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ ತಳಿಯತಕ್ಕಿ ಬೊಳಕ್ ತಯಾರಿಸುತ್ತಾಳೆ. ದುಂಡಗಿನ ತಟ್ಟೆಯಲ್ಲಿ ಅಕ್ಕಿ ತುಂಬಿ ಅದರ ಮಧ್ಯೆ ರೇಷ್ಮೆಯ ಕೆಂಪು ವಸ್ತ್ರವನ್ನು ತ್ರಿಕೋನಾಕಾರದಲ್ಲಿ ಮಡಚಿಟ್ಟು, ದೀಪ ಹಚ್ಚುವಳು. ಇನ್ನೊಂದು ಕೆಂಪು ರೇಷ್ಮೆಯ ಬಟ್ಟೆಯಲ್ಲಿ ತೆಂಗಿನಕಾಯಿ ಅಥವಾ ಸೌತೇಕಾಯಿಯನ್ನು ಸುತ್ತಿ ತ್ರಿಕೋನಾಕಾರದ ಬಟ್ಟೆಯ ಮೇಲೆ ಇಡಲಾಗುತ್ತದೆ. ಈ ಕಾಯಿಗೆ ಕೊಡವತಿಯ ಮಂಗಲಸೂತ್ರ ಪತ್ತಾಕ್ ಅನ್ನು ತೊಡಿಸಲಾಗುತ್ತದೆ. ಇದರ ಪಕ್ಕದಲ್ಲಿ ಗಾಜಿನ ಕರಿಬಳೆಗಳು, ವೀಳ್ಯದೆಲೆ ಹಾಗೂ ಬಾಳೆ ಹಣ್ಣು ಇಡಲಾಗುತ್ತದೆ. ಇದರೊಂದಿಗೆ ಅಡಿಕೆ ಚೂರುಗಳನ್ನೂ ಇಡಲಾಗುತ್ತದೆ.

ನೆಲ್ಲಕ್ಕಿ ನಡುಬಾಡೆಯ ತೂಗುದೀಪದ ಕೆಳಗೆ ಎತ್ತರದ ಮೂರು ಕಾಲಿನ ಮಣೆ ಅಥವಾ ಕುರ್ಚಿಯ ಮೇಲೆ ಈ ಅಲಂಕರಿಸಲಾದ ತಟ್ಟೆಯನ್ನು ದೀಪದ ಎದುರಿಗೆ ಇಡಲಾಗುತ್ತದೆ. ನಂತರ ಮನೆಯವರೆಲ್ಲರೂ ಸ್ನಾನ ಮಾಡಿ ಶುಭ್ರರಾಗಿ ತಟ್ಟೆಯಲ್ಲಿಟ್ಟಿರುವ ಅಕ್ಷತೆಯನ್ನು ಕಾವೇರಿಯ ಸಾಂಕೇತಿಕ ಮೂರ್ತಿಗೆ ಹಾಕಿ, ಧೂಪದ ಹೊಗೆ ಕೊಟ್ಟು ನಮಸ್ಕರಿಸುತ್ತಾರೆ. ಮನೆ ಹಿರಿಯರು ಕಿರಿಯರಿಗೆ ಆಶೀರ್ವದಿಸುತ್ತಾರೆ.

ಕಣಿ ಪೂಜೆ ಮುಗಿದ ನಂತರ ಮನೆಯಲ್ಲಿರುವ ಬಾವಿ ನೀರಿಗೆ ವೀಳ್ಯದೆಲೆ ಸಮರ್ಪಿಸಿ, ತೆಂಗಿನಕಾಯಿ ಒಡೆದು ನಮಸ್ಕರಿಸಲಾಗುತ್ತದೆ. ಇದಾದ ಮೇಲೆ ಗಂಗಾ ಪೂಜೆ ಮಾಡಿ ಕಾವೇರಿ ಪುಣ್ಯ ತೀರ್ಥವನ್ನು ಮನೆಗೆ ತರುತ್ತಾರೆ. ಕಣಿ ಪೂಜೆ ಮಾಡಿ ಆದ ಮೇಲೆ ಮನೆಯ ಮುತ್ತೆöÊದೆ ಅಡುಗೆ ಕೋಣೆಯಲ್ಲಿ ಮೂರು ಪುಟ್ಟ ದೋಸೆಗಳನ್ನು ತಯಾರಿಸಿ, ಅದನ್ನು ಮನೆ ಮುಂದೆ ಇಟ್ಟಿರುವ ಬೊತ್ತೆ ಅಥವಾ ಬೆತ್ತುಗೆ ಸಿಕ್ಕಿಸುತ್ತಾರೆ. ಇನ್ನೂ ಮೂರು ದೋಸೆಗಳನ್ನು ಒಂದು ಬಾಳೆಯೆಲೆಯಲ್ಲಿಟ್ಟುಕೊಂಡು ಮನೆಯ ಗದ್ದೆಯ ಏರಿಯ ಮೇಲೆ ಹಾಕಲಾಗಿರುವ ಬೆತ್ತುಗೆ ಸಿಕ್ಕಿಸಿ ನೈವೇದ್ಯವನ್ನು ಸ್ವೀಕರಿಸಲು ದೇವರನ್ನು ಕೂಗಿ ಕರೆಯುವ ಸಂಪ್ರದಾಯವಿದೆ.

ಪೂಜಿಸಿ ಮನೆಗೆ ತಂದ ಗಂಗೆಯ ನೀರಿನಲ್ಲಿ ಅಡುಗೆ ಮಾಡಲಾಗುತ್ತದೆ. ಈ ದಿನ ಎಲ್ಲಾ ಮನೆಗಳಲ್ಲೂ ದೋಸೆಯೇ ಪ್ರಮುಖ ಅಡುಗೆ. ಸಿಹಿಕುಂಬಳದಿAದ ತಯಾರಿಸಿದ ಪಲ್ಯದೊಂದಿಗೆ ದೋಸೆ ಸೇವಿಸಲಾಗುತ್ತದೆ.

ಸಾಮಾನ್ಯವಾಗಿ ಕೊಡಗಿನ ಎಲ್ಲಾ ಹಬ್ಬಗಳಲ್ಲೂ ಮಾಂಸಾಹಾರಕ್ಕೆ ಆದ್ಯತೆ ಇದ್ದರೆ ಕಣಿ ಪೂಜೆಯ ದಿನ ಮನೆಗಳಲ್ಲಿ ಮಾಂಸಾಹಾರಕ್ಕೆ ನಿಷೇಧ ಇರುತ್ತದೆ. ಕಣಿ ಪೂಜೆಯಲ್ಲಿ ಬಳಸಿದ ಹೂಗಳನ್ನು ಸಂಜೆಯ ವೇಳೆ ಹರಿಯುವ ನೀರಿನಲ್ಲಿ ಹಾಕುವುದು ರೂಢಿಯಲ್ಲಿದೆ. ಕೆಲವು ಮನೆಗಳಲ್ಲಿ ಕಾವೇರಿಯ ಸಾಂಕೇತಿಕ ಮೂರ್ತಿಯನ್ನು 2-3 ದಿನಗಳವರೆಗೂ ಇಡುವುದಿದೆ.

ಕೃಷಿ ಪ್ರಧಾನ ಕೊಡಗಿನಲ್ಲಿ ಬೊತ್ತೆ ಅಥವಾ ಬೆತ್ತು ಕಟ್ಟುವುದಕ್ಕೆ ವಿಶೇಷ ಮಹತ್ವ ಇದೆ. ಸ್ಥಳೀಯವಾಗಿ ಸಿಗುವ ಬೆತ್ತು ಮರದ ಕೋಲಿನ ತುದಿಗೆ ನೌಕಟೆ ಎಂಬ ಬಳ್ಳಿಯನ್ನು ವೃತ್ತಾಕಾರವಾಗಿ ಸುತ್ತಿ ಬೆತ್ತು ಕಟ್ಟಲಾಗುತ್ತದೆ. ಇದನ್ನು ಮನೆಯ ಅಂಗಳ, ಗೊಬ್ಬರ ಗುಂಡಿ, ಭತ್ತದ ಗದ್ದೆಗಳಲ್ಲಿ ಊರುತ್ತಾರೆ.

ಈ ಆಚರಣೆಗೆ ಮಹಾಭಾರತದ ಕಥೆಯ ನಂಟು ಕೂಡ ಇದೆ. ಹಾಗಾಗಿಯೇ ತೀರ್ಥೋದ್ಭವಕ್ಕೆ ಒಂದು ದಿನ ಮುಂಚಿತವಾಗಿ ಗದ್ದೆಗಳಲ್ಲಿ ಕಟ್ಟುವ ಬೆತ್ತುವಿನ ಮೇಲೆ ತೀರ್ಥೋದ್ಭವದ ನಂತರ ಬಾಳೆ ಎಲೆ ಇಟ್ಟು ಅದರಲ್ಲಿ ದೋಸೆ ಮತ್ತು ಸಿಹಿ ಕುಂಬಳದ ಪಲ್ಯ, ತೆಂಗಿನ ಕಾಯಿ ತುರಿ, ಸಕ್ಕರೆ, ಬಾಳೆ ಹಣ್ಣಿನ ನೈವೇದ್ಯ ಇಟ್ಟು ಅದಕ್ಕೆ ಹೂವುಗಳಿಂದ ಸಿಂಗರಿಸಲಾಗುತ್ತದೆ. ನಂತರ ನೆಲ ದೈವ, ಊರು ದೈವ, ಕಾವೇರಿ ಮಾತೆಯನ್ನು ಪ್ರಾರ್ಥಿಸುತ್ತಾ ಬೆತ್ತಿನ ಮೇಲೆ ಹಿಟ್ಟು ಇಟ್ಟಿದ್ದೇವೆ ಕುವ್ವಾ...ಕೂ ಮತ್ತೆ ಕೆಲವೆಡೆ ಪಾಂಡವರು, ಕೌರವರು ಕೂ ಎಂದು ಕರೆಯಲಾಗುತ್ತದೆ. ಇದಕ್ಕೆ ಪಾಂಡವರಿಗೆ ಇಡುವುದು ಎಂದು ಕೂಡ ಹೇಳಲಾಗುತ್ತದೆ.

ಬೆತ್ತು ಕಟ್ಟುವುದರ ಹಿನ್ನೆಲೆ

ವನವಾಸ ಮುಗಿಸಿ ಬಂದ ಪಾಂಡವರು ಕೌರವರ ಬಳಿ ಬಂದು ತಮ್ಮ ಪಾಲಿನ ಆಸ್ತಿ ಮರಳಿ ಕೇಳುತ್ತಾರೆ. ಆಗ ಕೌರವರು ಈಗ ಗದ್ದೆ ಬಿತ್ತಿಯಾಯಿತು ಬೆತ್ತು ಕುತ್ತಿಯಾಯಿತು, ಬೆಳೆ ಕಟಾವಿನ ನಂತರ ಹೊಲ ಗದ್ದೆಗಳನ್ನು ಬಿಟ್ಟು ಕೊಡುತ್ತೇವೆ ಎಂದು ಹೇಳುತ್ತಾರೆ. ಬೆಳೆ ಕಟಾವಿನ ಸಮಯದಲ್ಲಿ ಗದ್ದೆಯಲ್ಲಿ ಒಂದು ಹೊರೆಯಷ್ಟು ಬೆಳೆಯನ್ನು ಕೊನೆಯಲ್ಲಿ ಆ ಗದ್ದೆಯ ಒಡೆಯನ ಮನೆಯವರೇ ಕಟಾವು ಮಾಡಿ ಆ ಮನೆಯವರೇ ಹೊತ್ತು ಮನೆಗೆ ತರುತ್ತಾರೆ. ಈ ಹೊರೆಯನ್ನು ಅರ್ಕಟ್ಟು ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಪಾಂಡವರು ಮತ್ತೆ ಪಾಲು ಕೇಳಲು ಬರುವಾಗ ಬೆಳೆ ಕೊಯ್ದಾಯಿತು, ಹೊರೆ ಹೊತ್ತಾಯಿತು ಮುಂದಿನ ವರ್ಷ ಗದ್ದೆ ಬಿತ್ತುವ ಮೊದಲೇ ಬನ್ನಿ ಎಂದು ಹೇಳಿ ಕಳಿಸುತ್ತಾರೆ. ಪಾಂಡವರು ತೀರ್ಥೋದ್ಭವದ ದಿನದಂದು ಬರುತ್ತಾರೆ ಎನ್ನುವುದು ನಂಬಿಕೆ. ಇನ್ನೊಂದು ನಂಬಿಕೆಯ ಪ್ರಕಾರ ಪಾಂಡವರು ವನವಾಸಕ್ಕೆ ತೆರಳುವಾಗ ತಮ್ಮ ಗದ್ದೆಯನ್ನು ಕಾವೇರಮ್ಮನ ಸುಪರ್ದಿಗೆ ಬಿಟ್ಟು ಹೋಗುತ್ತಾರೆ. ಇಲ್ಲಿಯ ರೈತಾಪಿ ಮಕ್ಕಳು ಕಾವೇರಿ ಮಾತೆಯ ಬಳಿ ಬಂದು ಪಾಂಡವರು ಮರಳಿ ಬರುವವರೆಗೂ ತಾವು ಬೆಳೆ ಬೆಳೆದುಕೊಳ್ಳುತ್ತೇವೆ ಎಂದು ಕೇಳಿದಾಗ ತಾಯಿ ಒಪ್ಪುತ್ತಾಳೆ. ಪಾಂಡವರು ಮರಳಿ ಬಂದಾಗ ಕಾವೇರಿ ಮಾತೆ ಹೊಲ ಗದ್ದೆಗಳನ್ನು ಹಿಂದಿರುಗಿಸಲು ಹೇಳಿದಾಗ ಅಮ್ಮಾ ಈ ವರ್ಷ ಭತ್ತ ಬಿತ್ತಿ ಬೆತ್ತು ಕುತ್ತಿಯಾಯಿತು ಮುಂದಿನ ವರ್ಷ ಬಿಟ್ಟು ಕೊಡುತ್ತೇವೆ ಎಂದು ಹೇಳುತ್ತಾರೆ. ಕಾವೇರಿ ತಾಯಿ ಪಾಂಡವರನ್ನು ಒಪ್ಪಿಸಿ ಕಳುಹಿಸುತ್ತಾಳೆ. ಅಲ್ಲಿಂದ ಮುಂದಿನ ಪ್ರತೀ ವರ್ಷ ಪಾಂಡವರು ತಮ್ಮ ಜಾಗವನ್ನು ಮರಳಿ ಪಡೆಯಲು ಬರುತ್ತಾರೆ ಎನ್ನುವ ನಂಬಿಕೆ. ಹೇಗಿದ್ದರೂ ಅವರ ಜಾಗ ಎನ್ನುವ ಕಾರಣಕ್ಕೆ ಅವರಿಗೆ ದೋಸೆ, ಬಾಳೆ ಹಣ್ಣಿನ ನೈವೇದ್ಯ ಇಡಲಾಗುತ್ತದೆ ಎನ್ನಲಾಗುತ್ತದೆ.

ಕೊಡಗು ಕೃಷಿ ಪ್ರಧಾನ ಜಿಲ್ಲೆ. ಹಾಗಾಗಿ ಪವಿತ್ರ ಕಾವೇರಿ ತೀರ್ಥೋದ್ಭವದ ಮಾರನೆಯ ದಿನ ಬೊತ್ತೆ ಅಥವಾ ಬೆತ್ತು ಕಟ್ಟುವುದಕ್ಕೆ ವಿಶೇಷ ಮಹತ್ವ ಇದೆ. ಸ್ಥಳೀಯವಾಗಿ ಸಿಗುವ ಬೆತ್ತು ಮರದ ಕೋಲಿನ ತುದಿಗೆ ನೌಕಟೆ ಎಂಬ ಬಳ್ಳಿಯನ್ನು ವೃತ್ತಾಕಾರವಾಗಿ ಸುತ್ತಿ ಬೆತ್ತು ಕಟ್ಟಲಾಗುತ್ತದೆ. ಇದನ್ನು ಮನೆಯ ಅಂಗಳ, ಗೊಬ್ಬರ ಗುಂಡಿ, ಭತ್ತದ ಗದ್ದೆಗಳಲ್ಲಿ ಊರುತ್ತಾರೆ. ಈ ಆಚರಣೆಗೆ ಮಹಾಭಾರತದ ಕಥೆಯ ನಂಟು ಕೂಡ ಇದೆ. ಪ್ರತೀ ವರ್ಷ ಪಾಂಡವರು ತಮ್ಮ ಜಾಗವನ್ನು ಮರಳಿ ಪಡೆಯಲು ಬರುತ್ತಾರೆ ಎನ್ನುವ ನಂಬಿಕೆ. ಹೇಗಿದ್ದರೂ ಅವರ ಜಾಗ ಎನ್ನುವ ಕಾರಣಕ್ಕೆ ಅವರಿಗೆ ದೋಸೆ, ಬಾಳೆ ಹಣ್ಣಿನ ನೈವೇದ್ಯ ಇಡಲಾಗುತ್ತದೆ ಎನ್ನುವ ಪ್ರತೀತಿ ಇದೆ.

ಮಿಲನಾ ಭರತ್, ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net