

ಮಡಿಕೇರಿ:
ಕೂರ್ಗ್ ಕಾಫಿವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ಮಿಸಿ, ನಿರ್ದೇಶಿಸಿರುವ ಕೊಡವ ಚಲನಚಿತ್ರ "ಕಾಂಗತ ಮೂಡ್"(ಖಿhe Shಚಿಜoತಿ) ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಪ್ರೊಮೋ ಮತ್ತು ಪೋಸ್ಟರ್ ಶನಿವಾರ ಬಿಡುಗಡೆ ಮಾಡಲಾಯಿತು. ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಪ್ರೊಮೋ ಮತ್ತು ಪೋಸ್ಟರ್ ಬಿಡುಗಡೆ ಮಾಡಿದರು. ನಂತರ ಮಾತನಾಡಿ ಕೊಡವ ಸಿನಿಮಾಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಕೊಡಗಿನಲ್ಲಿ ಹಿಂದೆ ಕೃಷಿ ಚಟುವಟಿಕೆ ಸುಖೀಮಯವಾಗಿತ್ತು. ತೋಟದ ಮಾಲೀಕ ಬೆಂಗಳೂರು ಅಥವಾ ಬೇರೆಲ್ಲೋ ಇದ್ದುಕೊಂಡು ರೈಟರ್ ಮೂಲಕ ತೋಟವನ್ನು ನಿಭಾಯಿಸುವ ಪ್ರೀತಿ ಮತ್ತು ನಂಬಿಕೆಯ ವ್ಯವಹಾರವಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದ್ದು, ಜೀವನ ಸಂಪೂರ್ಣ ಯಾಂತ್ರೀಕೃತವಾಗಿದೆ. ಪ್ರೀತಿ ಮತ್ತು ನಂಬಿಕೆ ಕಳೆದು ಹೋಗಿದೆ. ವ್ಯಕ್ತಿ ಹಾಗೂ ಸಮಾಜಕ್ಕೆ ಇರುವ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನವನ್ನು "ಕಾಂಗತ ಮೂಡ್" ಚಿತ್ರತಂಡ ಮಾಡಿದೆ.
ಮದ್ಯ ವ್ಯಸನ ಮತ್ತು ಮತಾಂತರದAತಹ ಸಾಮಾಜಿಕ ಪಿಡುಗು ಇಡೀ ವ್ಯವಸ್ಥೆಯ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎನ್ನುವುದನ್ನು ಚಿತ್ರದಲ್ಲಿ ಪ್ರತಿಬಿಂಬಿಸಲಾಗಿದೆ ಎಂದರು.
ಚಿತ್ರದ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ನಮ್ಮ ಸಂಸ್ಥೆಯ ಮೂಲಕ ಇಲ್ಲಿಯವರೆಗೆ ಆರು ಕೊಡವ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಲಾಗಿದೆ. ಅಂತರರಾಷ್ಟಿçÃಯ ಚಲನಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರಗಳು ಪ್ರಶಸ್ತಿಗಳನ್ನು ಗೆದ್ದಿವೆ. ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಸಮುದಾಯದ ಕೊಡವ ಪ್ರತಿಭೆಗಳು ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನುವುದನ್ನು ಸಾಕ್ಷೀಕರಿಸಲು ಪ್ರತಿವರ್ಷ ಒಂದು ಕೊಡವ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎಂದರು.
ಚಿತ್ರದ ಸಹ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ ಕೊಡಗಿನಲ್ಲಿ ಸಿನಿಮಾಸಕ್ತಿ ಕಡಿಮೆ ಇದೆ, ಕೊಡವ ಚಿತ್ರಗಳಿಗೆ ನಿರೀಕ್ಷಿತ ಬೆಂಬಲ ದೊರೆಯುತ್ತಿಲ್ಲ. ಹಾಕಿದ ಹಣ ಮರಳಿ ಬರುವುದೇ ಕಷ್ಟವಾಗಿದೆ. ಆದರೂ ಕೊಡವ ಭಾಷೆಯ ಮೇಲಿನ ಅಭಿಮಾನದಿಂದ ವರ್ಷಕ್ಕೆ ಒಂದು ಸಿನಿಮಾವನ್ನು ನಿರ್ಮಿಸುತ್ತಿದ್ದೇವೆ ಎಂದರು.
ಚಿತ್ರದ ಸಹ ನಿರ್ದೇಶಕಿ ಈರಮಂಡ ಹರಿಣಿ ವಿಜಯ್ ಮಾತನಾಡಿ ಕೊಡಗಿನ ಜನ ಬೇರೆ ಸಿನಿಮಾಗಳನ್ನು ನೋಡುತ್ತಾರೆ, ಆದರೆ ಕೊಡವ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆ ಇದೆ. ಪ್ರೋತ್ಸಾಹದ ಕೊರತೆಯಿಂದ ಚಿತ್ರ ನಿರ್ಮಾಣ ಭಯ ಮತ್ತು ಬೇಸರವನ್ನು ಮೂಡಿಸುತ್ತದೆ ಎಂದು ಹೇಳಿದರು.
ಚಿತ್ರದ ನಾಯಕ ನಟ ಚಡಿಯಂಡ ಸಂತೋಷ್ ಮೇದಪ್ಪ, ಚಿತ್ರದ ನಿರ್ಮಾಣ ನಿರ್ವಹಣೆ ಮಾಡಿರುವ ನಟ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿದರು.