

ಸಿಂಧನೂರು: ತಾಲೂಕಿನ ಚನ್ನಳ್ಳಿ, ಸಿಂದ್ರಾಂಪುರ, ಮುಕ್ಕುಂದಾ, ಸಿಂಗಾಪುರ, ಹುಡಾ ಮತ್ತು ಗೊಬ್ಬರಕಲ್ ಗ್ರಾಮಗಳಿಗೆ ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರ ಕೃಷಿ ವಿಜ್ಞಾನಿಗಳ ತಂಡ ಮಂಗಳವಾರ ಭೇಟಿ ನೀಡಿ, ಭತ್ತದ ಬೆಳೆಯಲ್ಲಿ ಕಣೆ ನೊಣದ ನಿರ್ವಹಣೆ ಕುರಿತು ಮಾಹಿತಿ ನೀಡಿತು.
ತಾಲೂಕಿನ ಕೆಲವು ಭಾಗಗಳಲ್ಲಿ ಕಣೆ ನೊಣದ ಬಾಧೆ ಕಂಡುಬಂದಿದ್ದು ಇವುಗಳ ಹತೋಟಿ/ನಿರ್ವಹಣೆ ಕುರಿತು ಕೀಟಶಾಸ್ತ್ರ ತಜ್ಞ ಸುಜಯ ಹುರುಳಿ ಮಾತನಾಡಿ, ಕಣೆ ನೊಣವು ಸಾಮಾನ್ಯವಾಗಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಂಡುಬರುವಂಥ ಕೀಟವಾಗಿದ್ದು ಇತ್ತೀಚೆಗೆ ತುಂಗಭದ್ರಾ ಅಚ್ಚು ಕಟ್ಟು ಪ್ರದೇಶದಲ್ಲಿ ಹವಾಮಾನದ ವೈಪರಿತ್ಯದಿಂದ ಮತ್ತು ತಡವಾಗಿ ನಾಟಿ ಮಾಡಿದ ಭತ್ತದ ಬೆಳೆಯಲ್ಲಿ ಕೀಟದ ಭಾದೆಯು ಕಾಣಿಸಿಕೊಂಡಿದೆ.
ಈ ಕೀಟದ ಬಾಧೆಯನ್ನು ನಿರ್ವಹಿಸಲು ಸಸಿ ಮಡಿ ಹಂತದಲ್ಲಿ ಬಿತ್ತುವ ಮುನ್ನ 2 ಮಿಲೀ ಕ್ಲೋರೋಫೈರಿಫಾಸ್ 20 ಇ.ಸಿ. ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೀಜಗಳನ್ನು ಈ ದ್ರಾವಣದಲ್ಲಿ 12 ತಾಸುಗಳವರೆಗೆ ನೆನೆಸಿ ಬಿತ್ತುವುದರಿಂದ ಸಸಿಮಡಿಯಲ್ಲಿ ಹುಳುವಿನ ಭಾದೆಯನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ಗೊರೆಬಾಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಡ್ಡಿ, ಹುಡಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಮನಗೌಡ, ಆತ್ಮ ಯೋಜನೆಯ ಗುರುಸಿದ್ದಲಿಂಗಯ್ಯ ಇತರರಿದ್ದರು.