

ಮಡಿಕೇರಿ: ನಲ್ವತ್ತೋಕ್ಲು ಚೋಕಂಡಳ್ಳಿ ಕಂದೂರಿ ಹಜ್ರತ್ ಮುಹಮ್ಮದ್ ಪೈಗಂಬರ್‌ರ ಮುಹ್‌ಜಿಸತ್ತಿನಿಂದ ಪ್ರಸಿದ್ಧಿ ಹೊಂದಿರುವ ಕಂದೂರಿ ಈದ್ ಮಿಲಾದ್ ನ್ನು ಸೆ.೨೧ ಮತ್ತು ೨೨ ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಈದ್ ಮಿಲಾದ್ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಪಿ.ಎ.ಸಿರಾಜುದ್ದೀನ್ ತಿಳಿಸಿದರು.
ಎರಡು ದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಸೆ.೨೧ ರಂದು ಅಸರ್ ನಮಾಜಿನ ಬಳಿಕ ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ.ರಫಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ ೭ ಗಂಟೆಗೆ ಅಬ್ದುಲ್ ಲತೀಫ್ ಸಖಾಫಿ ಕಾಂದಪುರಂ ನೇತೃತ್ವದಲ್ಲಿ ಮದನೀಯಂ ಸದಸ್ಸ್ ಮತ್ತು ನಸೀಹತ್ ನಡೆಯಲಿದ್ದು, ಕಾರ್ಯಕ್ರಮವನ್ನು ಸೈಯದ್ ಮಹದಿ ತಂಗಳ್ ಉದ್ಘಾಟಿಸಲಿದ್ದಾರೆ. ಮುಬಶ್ಯಿರ್ ಅಹ್ಸನಿ ಅಲ್ ಕಾಮಿಲ್ ಪ್ರಾರ್ಥನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಲ್ವತೋಕ್ಲು ಚೋಕಂಡಳ್ಳಿ ಜುಮಾ ಮಸೀದಿ ಅಧ್ಯಕ್ಷ ಪಿ.ಎ.ಹನೀಫ್, ಕೊಡವ ಮುಸ್ಲಿಂ ಅಸೊಶಿಯೇಶನ್ ಅಧ್ಯಕ್ಷ ಡಿ.ಎಚ್.ಸೂಪಿ ಹಾಜಿ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.೨೨ ರಂದು ಬೆಳಿಗ್ಗೆ ೫ ಗಂಟೆಗೆ ಮೌಲಿದ್ ಪಾರಾಯಣ, ೮ ಗಂಟೆಗೆ ರಿಫಾಯಿ ರಾತೀಬ್ ಸಂಘದವರಿಂದ ಮನೆಗಳಿಗೆ ಭೇಟಿ, ೧೦ ಗಂಟೆಗೆ ಈದ್ ಮಿಲಾದ್ ರ‌್ಯಾಲಿ ನಡೆಯಲಿದೆ. ೧೧ ಗಂಟೆಗೆ ವಯನಾಡ್‌ನ ಬಶೀರ್ ಅಬ್ದುಲ್ಲಾ ಸಖಾಫಿ ಅವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದ್ದು, ೧೧.೩೦ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮವನ್ನು ಚೋಕಂಡಳ್ಳಿ ಜುಮಾ ಮಸೀದಿ ಮುದ್ರರಿಸ್ ಜನಾಬ್ ಮುಬಶ್ಯಿರ್ ಅಹ್ಸನಿ ಕಾಮಿಲ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ.ರಫಿ ವಹಿಸಲಿದ್ದಾರೆ. ಸೈಯದ್ ಮಹದಿ ತಂಙಳ್ ಪ್ರಾರ್ಥನೆ ನೆರವೇರಿಸಲಿದ್ದು, ಚೋಕಂಡಳ್ಳಿ ಮುಹಲ್ಲಿಂ ಬಿ.ಯು.ಎಂ ಸದರ್ ಜನಾಬ್ ಬಶೀರ್ ಸಖಾಫಿ ಶುಭಾಶಯ ಭಾಷಣ ಮಾಡಲಿದ್ದಾರೆ. ಜನಾಬ್ ಹುಸೈನ್ ಅಹ್ಸನಿ ಮುಹೀನಿ ಮುಖ್ಯ ಪ್ರಭಾಷಣ ಮಾಡಲಿದ್ದು, ಚೋಕಂಡಳ್ಳಿ ಸಿರಾಜಿದ್ದೀನ್ ಝಹರಿ ಕಂದೂರಿ ದಿನದ ದುಅ ನೇತೃತ್ವ ವಹಿಸಲಿದ್ದಾರೆ. ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ೨ ಗಂಟೆಗೆ ಅನ್ನದಾನ ನಡೆಯಲಿದ್ದು, ಸ್ತ್ರೀಯರಿಗೆ ಪ್ರತ್ಯೇಕ ಸೌಕರ್ಯ ಏರ್ಪಡಿಸಲಾಗಿದೆ. ಅಲ್ಲದೇ ನಾಡಿನ ಮದ್ರಸ ಮಕ್ಕಳಿಂದ ಧಪ್ ಪ್ರದರ್ಶನ ಹಾಗೂ ರಾತ್ರಿ ತಬರುಕ್ ವಿತರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಕೆ.ಎಂ.ರಫಿ, ಸದಸ್ಯರುಗಳಾದ ಪಿ.ಎ.ಅಬ್ದುಲ್ ಮಜಿದ್, ಟಿ.ಎಂ.ಅಸಿಮ್, ಕೆ.ಎಸ್.ಮೊಯ್ದಿನ್ ಹಾಗೂ ಪಿ.ಯು.ನೂರುದ್ದೀನ್ ಉಪಸ್ಥಿತರಿದ್ದರು.