

ಮಡಿಕೇರಿ:
ಕನ್ನಡ ಚಲನಚಿತ್ರರಂಗದಲ್ಲಿ ಗುರುತಿಸಿಕೊಂಡ ಕೊಡಗಿನ ಮೊದಲ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ದೇಶನದ ೨ನೇ ಕನ್ನಡ ಚಲನಚಿತ್ರ ಕಂದೀಲು ಪ್ರೀಮಿಯರ್ ಶನಿವಾರ (ಆ.೧೯) ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಲಿದೆ.
ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಪ್ರಯುಕ್ತ ಪತ್ರಿಕಾ ಭವನದ ಸಭಾಂಗಣದಲ್ಲಿ ಮಧ್ಯಾಹ್ನ ೨.೩೦ ಗಂಟೆಗೆ ಪ್ರೀಮಿಯರ್ ಶೋ ನಡೆಯಲಿದ್ದು, ಕೊಡಗಿನ ಸಿನಿ ಪ್ರೇಮಿಗಳಿಗೆ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ, ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ನಿರ್ದೇಶಕಿ, ನಿಮಾರ್ಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ.
ಕಾಂತಾರ ಚಿತ್ರದಲ್ಲಿ ನಟಿಸಿರುವ ಪ್ರಭಾಕರ್ ಕುಂದರ್ ನಾಯಕ ನಟನಾಗಿ ನಟಿಸಿರುವ ಕಂದೀಲು ಚಿತ್ರದಲ್ಲಿ ನಟಿ ವನಿತಾ ರಾಜೇಶ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಡಗಿನ ಬಾಲನಟಿ ಈರಮಂಡ ಖುಷಿ ಕಾವೇರಮ್ಮ ಮಗಳಾಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಈರಮಂಡ ಹರಿಣಿ ವಿಜಯ್ ಕೂಡ ನಟಿಸಿದ್ದಾರೆ.