

ಮೈಸೂರು: ರಾಮಕೃಷ್ಣನಗರದ ನಟನ ರಂಗ ಶಾಲೆಯಲ್ಲಿ ನ.26 ರಂದು ಸಂಜೆ 6.30ಕ್ಕೆ ‘ಕಂಡಾಯದ ಕೋಳಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಮಂಜು ಕೋಡಿ ಉಗನೆ ರಚನೆಯ ಈ ನಾಟಕವನ್ನು ಕಿರಣ್ ಗಿರ್ಗಿ ನಿರ್ದೇಶಿಸುವ ಜತೆಗೆ ಸಂಗೀತ ಜವಾಬ್ದಾರಿ ಹೊತ್ತಿದ್ದಾರೆ. ಅಭ್ಯಾಸಿ ಟ್ರಸ್ಟ್ ಚಾಮರಾಜನಗರ ತಂಡ ಅಭಿನಯಿಸಿದೆ.
ಚಾಮರಾಜನಗರ ಗಡಿಭಾಗದ ಜನಪದರ ನಿತ್ಯದ ಬದುಕು ಆರಂಭವಾಗುವುದು ದೈವ ಸ್ವರೂಪಿ ಸಂತರೆನಿಸಿರುವ ಮಲೆ ಮಾದೇಶ್ವರ, ಮಂಟೇಲಿಂಗಯ್ಯರವರ ಮೇಲಿನ ಭಕ್ತಿ ನಮನಗಳ ಮೂಲಕವೇ.
ಕಂಡಾಯಕ್ಕೆ ಬಿಟ್ಟ ಕೋಳಿಯನ್ನು ಕದ್ದು ಮಾರಿ ಕುಡಿದ ಆಕೆಯ ಗಂಡ ಕಾಳೀರನಿಗೆ ಕಠಿಣ ದೇವರು ಮಂಟೇಲಿಂಗಯ್ಯನಿಂದ ಗಂಡಾಂತರ ಒದಗಿ ಬರುವ ನಂಬಿಕೆ ಹೆಚ್ಚಿ ದೇವರ ಹಾರಕ್ಕೆ ಒಲುವಾರ ಮಾಡಿದ ತಪ್ಪಿಗೆ ತಪ್ಪುಗಾಣಿಕೆ ಕಟ್ಟಿ ಪಾಪ ನಿವೇದನೆ ಮಾಡಿಕೊಳ್ಳುತ್ತಾಳೆ. ಆದರೂ ಕುಂಟಗಿರಿಯ ಕಾಳೀರನ ಮೇಲೆ ಜಗಳ ಕಾದು, ಕಂಟಕ ಒದಗಿ ಬರುತ್ತದೆ. ಸಣ್ಣ ಕಾರಣವೊಂದು ಗಂಭೀರ ಸಂಘರ್ಷಕ್ಕೆ ನೆಪವಾಗುತ್ತ ಇಡೀ ಸಮಾಜವನ್ನು ಆವರಿಸಿಕೊಂಡು ಬದುಕಿನ ದಿಕ್ಕನ್ನು ದುರಂತದೆಡೆಗೆ ಸೆಳೆದು ಬಿಸಾಡಬಲ್ಲದು. ಅಂತಹ ದುರಂತಗಳ ಸರಮಾಲೆಗಳನ್ನು ಹಿಡಿದಿಟ್ಟುಕೊಂಡಿರುವ ಕತೆಯೇ ‘ಕಂಡಾಯದ ಕೋಳಿ’ ಆಗಿದೆ.