

ಯಳಂದೂರು: ತಾಲೂಕಿನ ಯರಗಂಬಳ್ಳಿ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಶುಕ್ರವಾರ ಜರುಗಬೇಕಿದ್ದ ಮಂಟೇಸ್ವಾಮಿ ಕಂಡಾಯೋತ್ಸವ 2 ಗುಂಪಿನ ನಡುವೆ ಉಂಟಾದ ವೈಮನಸ್ಸಿನಿಂದ ಸ್ಥಗಿತಗೊಂಡಿದ್ದು, ಪೊಲೀಸರು ಗ್ರಾಮದಲ್ಲೇ ಬೀಡುಬಿಟ್ಟಿದ್ದಾರೆ.
ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಪ್ರತಿವರ್ಷವೂ ಇಲ್ಲಿನ ಸಿದ್ದಪ್ಪಾಜಿ ದೇಗುಲದ ಬಳಿ ಕುರುಬನಕಟ್ಟೆ ಕ್ಷೇತ್ರದಿಂದ ಮಂಟೇಸ್ವಾಮಿ ಕಂಡಾಯೋತ್ಸವವನ್ನು ನಡೆಸಲಾಗುತ್ತಿತ್ತು. ಈ ಬಾರಿಯೂ ಉತ್ಸವ ನಡೆಸಲು ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಕುಲದ ಹೆಸರನ್ನು ಉತ್ಸವದಲ್ಲಿ ಹಾಕಿಸುವಂತೆ ಒಂದು ಗುಂಪು ಒತ್ತಾಯಿಸಿದೆ, ಇದಕ್ಕೆ ಮತ್ತೊಂದು ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಇಬ್ಬರಿಗೂ ವಾಗ್ಯುದ್ಧ ನಡೆದು ವಾತಾವರಣ ಬಿಗಡಾಯಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮದಲ್ಲಿ ಉಳಿದು ಕಂಡಾಯಗಳನ್ನು ಮೆರವಣಿಗೆ ಮಾಡದೆ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಲು ಅವಕಾಶ ಮಾಡಿಕೊಟ್ಟರು.