

ಮಂಡ್ಯ: ಕಂದಾಯ ಇಲಾಖೆ ನೌಕರರ ಭವನ ನಿರ್ಮಾಣ ಮಾಡಬೇಕು ಕನಸು ನನಸಾಗಿದೆ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಪೂರ್ವ ಭಾಗದಲ್ಲಿ ಕಂದಾಯ ಇಲಾಖಾ ನೌಕರರ ಸಂಘದ ವತಿಯಿಂದ ಗುರುವಾರ 90 ಲಕ್ಷ ರೂ ವೆಚ್ಚದ ಭವನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು.
ನನ್ನ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸುತ್ತೇನೆ. ಆದಷ್ಟು ಬೇಗ ಕೆಲಸ ಮುಗಿಸಿ ಒಳ್ಳೆಯ ಕೆಲಸಗಳನ್ನು ಕಂದಾಯ ಇಲಾಖೆ ನೌಕರರು ಮಾಡಬೇಕು. ಕರ್ನಾಟಕ ಸಂಘದ ಮಾದರಿಯಲ್ಲಿ ಕಂದಾಯ ಇಲಾಖೆ ನೌಕರರ ಭವನ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸುವ ಮೂಲಕ ಕೆಲಸ ಮಾಡಿ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕಂದಾಯ ಇಲಾಖೆ ನೌಕರರ ಭವನ ನಿರ್ಮಾಣ ಮಾಡುವ ಮೂಲಕ ನೌಕರರು ಒಂದು ಕಡೆ ಕುಳಿತು ಚರ್ಚೆ, ತರಬೇತಿ, ಸಭೆ ಮಾಡುವ ಮೂಲಕ ಜನ ಸಮುದಾಯಕ್ಕೆ ಒಳ್ಳೆ ಕೆಲಸ ಮಾಡಲು ಸಂಕಲ್ಪ ಮಾಡಬೇಕು. ಜಿಲ್ಲೆಯ ಹಿರಿಯರು ಕಂದಾಯ ಇಲಾಖೆ ನೌಕರರ ಭವನದ ನಿರ್ಮಾಣಕ್ಕೆ ಸಲಹೆ ಕೊಡಬೇಕು. ಜನರಿಗೆ ಸೇವೆ ಕೊಡಲು ಕಂದಾಯ ಇಲಾಖೆ ನೌಕರರಲ್ಲಿ ಒಗ್ಗಟ್ಟು, ಐಕ್ಯತೆ ಇರಲಿ. ರಾಷ್ಟ್ರೀಯ ಸದ್ಭಾವನ ದಿನಾಚರಣೆಯ ಸಂದರ್ಭದಲ್ಲಿ ಕಂದಾಯ ಇಲಾಖೆಯ ನೌಕರರ ಬಹುದಿನದ ಕನಸು ನೌಕರರ ಭವನ ಕಟ್ಟಲು ಹೊಸ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಡಿ.ತಮ್ಮಣ್ಣಗೌಡ ಮಾತನಾಡಿ, ರಾಜ್ಯದ 28 ಜಿಲ್ಲೆಗಳಲ್ಲಿ ಕಂದಾಯ ಇಲಾಖೆ ನೌಕರರ ಭವನವಿದೆ. ಮಂಡ್ಯ ಜಿಲ್ಲೆಯಲ್ಲಿ ಎರಡು ನಿವೇಶನಗಳು ಇದ್ದರೂ ಕಂದಾಯ ಇಲಾಖೆ ನೌಕರರ ಭವನ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದ ಭವನ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಶಂಭುಗೌಡ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ನಾಗೇಶ್, ಎಚ್.ಮಂಜುನಾಥ್, ಭಾಸ್ಕರ್, ಟಿ.ಪಿ.ಹರೀಶ್, ಎಂ.ರಾಜಣ್ಣ ಇತರರಿದ್ದರು.