

ರಾವಂದೂರು: ಪಿರಿಯಾಪಟ್ಟಣ ತಾಲೂಕು ರಾವಂದೂರು ಹೋಬಳಿ ನಾಡಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಂದಾಯ ಇಲಾಖೆಯ ವಿಶೇಷ ಆಂದೋಲನದ ಬಗ್ಗೆ ಉಪತಹಸೀಲ್ದಾರ್ ಕೆ.ಶುಭಾ ಅವರು ಜನರಲ್ಲಿ ಅರಿವು ಮೂಡಿಸಿದರು.
ಪಹಣಿಗಳಿಗೆ ಆಧಾರ್ ಸೀಡಿಂಗ್, ಎಫ್.ಐ.ಡಿ ದೊರೆತಿಲ್ಲದ ರೈತರಿಗೆ ಎಫ್.ಐ.ಡಿ ಮಾಡುವುದು, ವೇತನ ಅರ್ಜಿಗಳ ಫಲಾನುಭವಿಗಳ ಎನ್.ಪಿ.ಸಿ.ಐ ಕಾರ್ಯ ಮಾಡಿಸುವುದು, ಲ್ಯಾಂಡ್‌ಬೀಟ್( ಸರ್ಕಾರಿ ಸರ್ವೇ ನಂಬರ್‌ಗಳ ಬೌಂಡರ್ ಗುರುತಿಸುವುದು), ಬರ ಪರಿಹಾರ, ಪೌತಿ ಖಾತೆ ಅರ್ಜಿ ಸ್ವೀಕಾರ ಮಾಡಲಾಗುವುದು ಎಂದು ತಿಳಿಸಿದರು.
ರಾವಂದೂರು ಹೋಬಳಿ ಕಂದೇಗಾಲ ಗ್ರಾಮದಲ್ಲಿ ಲ್ಯಾಂಡ್‌ಬೀಟ್ ಮಾಡಲು ತಹಸೀಲ್ದಾರ್ ಸುರೇಂದ್ರಮೂರ್ತಿ ಸ್ಥಳಕ್ಕೆ ಧಾವಿಸಿ ಸರ್ವೇ ನಂಬರ್ 27ರ ಲ್ಯಾಂಡ್‌ಬೀಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ಈಗಾಗಲೇ ಎಲ್ಲ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನಿಗದಿತ ದಿನಾಂಕ ಹಾಗೂ ಸಮಯವನ್ನು ಗುರುತಿಸಲಾಗಿದ್ದು, ಅಧಿಕಾರಿಗಳು ರೈತರ ಸ್ಥಳಕ್ಕೆ ಆಗಮಿಸಿ ಸೂಕ್ತ ದಾಖಲಾತಿಗಳನ್ನು ಪಡೆದುಕೊಂಡು ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಲಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಐ.ಶ್ರೀಧರ್, ಗ್ರಾಮ ಲೆಕ್ಕಾಧಿಕಾರಿ ಯಲ್ಲಪ್ಪ ಹಾಜರಿದ್ದರು.