

ಚಿಕ್ಕಬಳ್ಳಾಪುರ: ಅಂತರ್ಜಲ ಮಟ್ಟ ಹೆಚ್ಚಿಸುವ ಎಚ್.ಎನ್.ವ್ಯಾಲಿ ನೀರು ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ಹರಿದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ತಂಬಿಟ್ಟು ಆರತಿ ಮಾಡಿ ಸಂಭ್ರಮಿಸಿದರು. ನಗರದ ವಾಪಸಂದ್ರದಿಂದ ಕಾಲ್ನಡಿಗೆಯಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಕಂದವಾರ, ಅರಸನಹಳ್ಳಿಗೆ ಹೊರಟ ರೈತರು ಅಲ್ಲಿ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.
ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಬಯಲು ಸೀಮೆಯ ಜಿಲ್ಲೆಗಳು ನಿರಂತರ ಬರದಿಂದ ತತ್ತರಿಸುತ್ತಿವೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಪ್ರಸ್ತುತ ಎಚ್.ಎನ್.ವ್ಯಾಲಿ ನೀರು ಕಂದವಾರ ಕೆರೆಗೆ ಪೂರೈಕೆಯಾಗುತ್ತಿರುವುದು ಸಂತಸದ ವಿಚಾರ. ಹಾಗೆಯೇ ಕುಂಟುತ್ತ ಸಾಗುತ್ತಿರುವ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಬೇಗ ಮುಗಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಪಕ್ಷಗಳು ರೈತರ ಹೆಸರಿನಲ್ಲಿ ಪ್ರಚಾರ ಕೈಗೊಂಡು ಆಡಳಿತದ ಚುಕ್ಕಾಣಿ ಹಿಡಿಯುತ್ತವೆ. ಬಳಿಕ ಕೃಷಿಕರ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಹೋರಾಟದ ಮೂಲಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಎಚ್ಚರಿಸಲಾಗುತ್ತಿದೆ ಎಂದರು. ಯಾವುದೇ ಸರ್ಕಾರಗಳು ಸಮರ್ಪಕ ನೀರಾವರಿ, ವಿದ್ಯುತ್, ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ, ಸಂಕಷ್ಟಕ್ಕೊಳಗಾಗುವ ರೈತರಿಗೆ ನೆರವು ನೀಡುವ ಮೂಲಕ ಅನ್ನದಾತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಹಸಿರು ಸೇನೆ ಸಂಚಾಲಕ ಎಸ್.ಲಕ್ಷ್ಮಣ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ತಾಲೂಕು ಅಧ್ಯಕ್ಷರಾದ ಸೀಕಲ್ ರಮಣರೆಡ್ಡಿ, ತಾದೂರು ಮಂಜುನಾಥ್, ರಾಮಾಂಜಿನಪ್ಪ, ಮುರಳಿ, ಮುಖಂಡರಾದ ಬಿ.ಎಂ.ಬಯ್ಯಪ್ಪ, ವೆಂಕಟ್ರೋಣಪ್ಪ, ಸುರೇಶ್ ಮತ್ತಿತರರು ಭಾಗವಹಿಸಿದ್ದರು.