

ಆಲ್ದೂರು: ಕಂಚಿನಕಲ್ ದುರ್ಗ ಗ್ರಾಮದ ರಸ್ತೆಯಲ್ಲಿ ಗುಂಡಿಬಿದ್ದಿದ್ದು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಾಗಿ ಶಾಸಕಿ ನಯನಾ ಮೊಟಮ್ಮ ಭರವಸೆ ನೀಡಿದರು.
ದೊಡ್ಡಮಾಗರವಳ್ಳಿ ಗ್ರಾಪಂ ಕಂಚಿನಕಲ್ ದುರ್ಗ ಗ್ರಾಮದಲ್ಲಿ 12.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಚಂಡುಗೋಡಿನಿಂದ ಕಂಚಿನಕಲ್ ದುರ್ಗದ ರಸ್ತೆ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ತಯಾರಿಸುವಂತೆ ಇಂಜಿನಿಯರ್‌ಗೆ ಸೂಚಿಸಿದರು.
ಸ್ಥಳೀಯವಾಗಿ ಕಾಡು ಪ್ರಾಣಿಗಳ ಹಾವಳಿಯಿಂದ ಬದುಕು ದುಸ್ತರವಾಗಿದೆ. ಕುಡಿಯುವ ನೀರಿನ ಸಮಸ್ಯೆಇದೆ ಎಂದು ಗ್ರಾಮಸ್ಥರು ಶಾಸಕರ ಗಮನ ಸೆಳೆದರು. ಅರಣ್ಯ ಇಲಾಖೆ ಸಚಿವರ ಗಮನಕ್ಕೆ ತಂದು ಶಾಶ್ವತ ಪರಿಹಾರ ಒದಗಿಸುವುದಾಗಿ ಶಾಸಕಿ ಭರವಸೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡು, ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಸೂಚಿಸಿದರು.
ದೊಡ್ಡಮಾಗರವಳ್ಳಿ ಗ್ರಾಪಂ ಅಧ್ಯಕ್ಷೆ ಮೇಘನಾ, ಉಪಾಧ್ಯಕ್ಷ ನಂದಿನಿ, ಸದಸ್ಯರಾದ ಪೂರ್ಣೇಶ್, ರಾಜು, ಬ್ಲಾಕ್ ಅಧ್ಯಕ್ಷ ಮೊಹಮ್ಮದ್ ಮುದಾಬಿರ್, ಹೋಬಳಿ ಅಧ್ಯಕ್ಷ ಕೆಳಗೂರು ಪೂರ್ಣೇಶ್, ಕಾರ್ಯದರ್ಶಿ ದೊಡ್ಡಯ್ಯ, ಶಿಕ್ಷಕರು, ಸಿಬ್ಬಂದಿ ಇದ್ದರು.